ಸುದೀಪ್, ಧನುಷ್ ಒಟ್ಟಿಗೆ ನಟನೆ?

ಕನ್ನಡದ ಅತ್ಯುತ್ತಮ ನಟ ಎಂದು ಕರೆಯಲ್ಪಡುವ ಸುದೀಪ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ಹೆಸರುವಾಸಿ. ತೆಲುಗಿನ ಈಗ ಚಿತ್ರದಿಂದ ಪ್ರೇಕ್ಷಕರ ಮನಗೆದ್ದ ಸುದೀಪ್ ಬೇರೆ ಭಾಷೆಯ ಚಿತ್ರರಂಗದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಕೂಡ ಇಷ್ಟವಾಗಿದ್ದಾರೆ.

ಈ ವರ್ಷ ಹಾಲಿವುಡ್ ಚಿತ್ರ ರೈಸನ್ ನಲ್ಲಿ ಸುದೀಪ್ ನಟಿಸುತ್ತಿದ್ದಾರೆ. ವೈಜ್ಞಾನಿಕ ಕಾಲ್ಪನಿಕ ಚಿತ್ರವಾಗಿರುವ ರೈಸನ್ ನ್ನು ಎಡ್ಡಿ ಆರ್ಯ ನಿರ್ದೇಶಿಸುತ್ತಿದ್ದಾರೆ. ಈ ಮಧ್ಯೆ ತೆಲುಗಿನಲ್ಲಿ ಅತ್ಯಂತ ಸುದ್ದಿ ಮಾಡಿರುವ ಉಯ್ಯಲವಾಡ ನರಸಿಂಹ ರೆಡ್ಡಿ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇವೆಲ್ಲದರ ನಡುವೆ ತಮಿಳಿನಿಂದ ದೊಡ್ಡ ಪ್ರಾಜೆಕ್ಟ್ ವೊಂದಕ್ಕೆ ಸುದೀಪ್ ಅವರಿಗೆ ಆಫರ್ ಬಂದಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ತಮಿಳಿನ ಖ್ಯಾತ ನಟ ರಜನಿಕಾಂತ್ ಅವರ ಅಳಿಯ ಧನುಷ್ ಅವರ ನಿರ್ದೇಶನದಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ಧನುಷ್ ನಟಿಸಿ ನಿರ್ದೇಶಿಸಲಿದ್ದಾರಂತೆ. ತಮಿಳು ನಟ ವಿಜಯ್ ಅವರ ಮರ್ಸೆಲ್ ಚಿತ್ರಕ್ಕೆ ಬಂಡವಾಳ ಹಾಕಿದ್ದ ತೆನಂಡಲ್ ಸ್ಟುಡಿಯೋಸ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆಯಂತೆ. ಈ ವರ್ಷವೇ ಪ್ರಾಜೆಕ್ಟ್ ಆರಂಭವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಧನುಷ್ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದು ಸುದೀಪ್ ಅವರಿಗೆ ಕಥೆ ಹೇಳಿದ್ದಾರಂತೆ. ಸುದೀಪ್ ಅವರು ಚಿತ್ರದ ಕಥೆ ಹಾಗೂ ತಮ್ಮ ಪಾತ್ರವನ್ನು ಒಪ್ಪಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನೂ ಶೀರ್ಷಿಕೆಯಿಡದ ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಸ್ವಾತಂತ್ರ್ಯಪೂರ್ವ ಕಾಲದ ಸೆಟನ್ನು ಚಿತ್ರೀಕರಣಕ್ಕೆ ಹಾಕಲಾಗುತ್ತಿದೆಯಂತೆ. ಬೇರೆ ಪ್ರಾಜೆಕ್ಟ್ ಗಳಲ್ಲಿ ಧನುಷ್ ಬ್ಯುಸಿಯಾಗಿದ್ದರೂ ಕೂಡ ಈ ಚಿತ್ರದ ಕೆಲಸ ಆರಂಭಿಸಲಿದ್ದಾರಂತೆ. ಚಿತ್ರಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದ್ದು ಅಧಿಕೃತ ಘೋಷಣೆ ಬಾಕಿಯಿದೆ ಎನ್ನಲಾಗುತ್ತಿದೆ.

ಈ ಮಧ್ಯೆ ಸುದೀಪ್ ಕನ್ನಡ ಚಿತ್ರಗಳಲ್ಲಿ ಕೂಡ ಬ್ಯುಸಿಯಾಗಿದ್ದಾರೆ. ಪ್ರೇಮ್ ಅವರ ವಿಲನ್ ಸಿನಿಮಾದ ಸಂಭಾಷಣೆ ಭಾಗವನ್ನು ಮುಗಿಸಿದ್ದಾರೆ. ಇನ್ನೆರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಅಂಬರೀಷ್ ನಟನೆಯ ಅಂಬಿ ನಿಂಗೆ ವಯಸ್ಸಾಯ್ತೊ ಸಿನಿಮಾವನ್ನು ಸುದೀಪ್ ತಮ್ಮ ಬ್ಯಾನರ್ ನಡಿ ಜಾಕ್ ಮಂಜು ಅವರ ಜೊತೆ ನಿರ್ಮಿಸುತ್ತಿದ್ದಾರೆ.

ಪವರ್ ಪಂಡಿ ಚಿತ್ರದಿಂದ ಸ್ಪೂರ್ತಿ ಪಡೆದುಕೊಂಡು ಈ ಸಿನಿಮಾ ಮಾಡುತ್ತಿದ್ದು ಅಂಬರೀಷ್ ಯುವಕನ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ನಂತರ ಎಸ್.ಕೃಷ್ಣಾ ಅವರ ಪೈಲ್ವಾನ ಮತ್ತು ಸೂರಪ್ಪ ಬಾಬು ಅವರ ಕೋಟಿಗೊಬ್ಬ 3 ಸಿನಿಮಾದಲ್ಲಿ ಕೂಡ ಸುದೀಪ್ ನಟಿಸಲಿದ್ದಾರೆ.

Facebook Auto Publish Powered By : XYZScripts.com