ಶುಭ ವಿವಾಹದ ಕಾವ್ಯ ಗೌಡ ‘ಬಕಾಸುರ’ ಮೂಲಕ ಬೆಳ್ಳಿತೆರೆಗೆ ಪ್ರವೇಶ

ಬೆಂಗಳೂರು: ಏಪ್ರಿಲ್ ೨೪ ರಂದು ಚಿತ್ರೀಕರಣದ ಪ್ರಾರಂಭವಾಗಬೇಕಿರುವ ‘ಬಕಾಸುರ’ ಸಿನೆಮಾದ ವಿತರಣೆ ಹಕ್ಕುಗಳನ್ನು ಜಾಕ್ ಮಂಜು ಈಗಾಗಲೇ ಖರೀದಿಸಿರುವುದು ವಿಶೇಷ. “ಇದು ಒಳ್ಳೆಯ ವಸ್ತುವಿನ ಚಿತ್ರ ಮತ್ತು ಜಾಕ್ ಮಂಜು ಅವರ ಕಣ್ಣಿಗೆ ಬಿತ್ತು. ಇದು ಅವರು ನೀಡುತ್ತಿರುವ ಉತ್ತೇಜನ. ಇದು ಸಾಕಷ್ಟು ಭರವಸೆ ಮೂಡಿಸಿದೆ” ಎನ್ನುತ್ತಾರೆ ಈಗ ನಟನಾಗಿರುವ ರೇಡಿಯೋ ಜಾಕಿ ರೋಹಿತ್.

‘ಕರ್ವ’ ಸಿನೆಮಾದಿಂದ ಬೆಳಕಿಗೆ ಬಂದ ನಟ ಈಗ ‘ಬಕಾಸುರ’ ಸಿನೆಮಾವನ್ನು ನಿರ್ಮಿಸಿ, ಸ್ವತಃ ನಟಿಸುತ್ತಿದ್ದಾರೆ. ‘ಕರ್ವ’ ನಂತರ ನಿರ್ದೇಶಕ ನವನೀತ್ ಅವರಿಗೂ ಇದು ಎರಡನೇ ಸಿನೆಮಾ. ಇದರಲ್ಲಿ ರವಿಚಂದ್ರನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ ಈ ಸಿನೆಮಾದ ನಾಯಕನಟಿಯಾಗಿ ಕಾವ್ಯ ಗೌಡ ಅವರನ್ನು ಆಯ್ಕೆ ಮಾಡಿಕೊಂಡಿರುವದು. ‘ಶುಭ ವಿವಾಹ’ ಮತ್ತು ‘ಗಾಂಧಾರಿ’ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಕಾವ್ಯ ಈಗ ಬೆಳ್ಳಿತೆರೆಯ ಪದಾರ್ಪಣೆಗೆ ಸಿದ್ಧರಾಗಿದ್ದಾರೆ. “ನಾವು ಪ್ರಾದೇಶಿಕ ಪ್ರತಿಭೆಗಳಿಗೆ ಹುಡುಕಾಟ ನಡೆಸಿದ್ದೆವು. ನಾವು ಆಡಿಷನ್ ಮಾಡಿದ ಕೆಲವು ನಟಿಯರಲ್ಲಿ ಕಾವ್ಯ ಅಂತಿಮವಾಗಿ ಆಯ್ಕೆಯಾದರು” ಎನ್ನುತ್ತಾರೆ ರೋಹಿತ್.

ಈಮಧ್ಯೆ ರವಿಚಂದ್ರನ್ ಎದುರು ಸುಧಾರಾಣಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಸೈಕಲಾಜಿಕಲ್ ಥ್ರಿಲ್ಲರ್ ಎನ್ನಲಾಗಿರುವ ಈ ಸಿನೆಮಾದಲ್ಲಿ ಜನಪ್ರಿಯ ನಟರಾದ ಮಾರ್ಕಂಡ ದೇಶಪಾಂಡೆ, ಸಾಯಿಕುಮಾರ್, ಪವಿತ್ರ ಲೋಕೇಶ್, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್ ಮತ್ತು ಸಿಹಿ ಕಹಿ ಚಂದ್ರು ಕೂಡ ನಟಿಸಲಿದ್ದಾರೆ.

Courtesy: Kannadaprabha

Facebook Auto Publish Powered By : XYZScripts.com