ವಿವಾದ ಸೃಷ್ಟಿಸಿದ ಪ್ರಿಯಾ ವಾರಿಯರ್ ನಟಿಸಿದ ಹಾಡಿನ ಕನ್ನಡ ಅರ್ಥವೇನು..? ಇಲ್ಲಿ ಓದಿ

ಹುಬ್ಬಿನ ಹುಡುಗಿ ಇಂಟೆರ್ನೆಟ್ ಆಕ್ರಮಿಸಿಕೊಂಡಿದ್ದಾಳೆ. ‘ಜುಮುಕಿ ಕಮ್ಮಲ್’ ಎಂಬ ಹಾಡಿನ ನಂತರ ಇದೀಗ ‘ಪ್ರಿಯಾ ಪ್ರಕಾಶ್ ಮತ್ತು ಕ್ಯೂಟಾಗಿ ನಾಚಿಕೊಳ್ಳುವ ಹುಡುಗ ರೋಷನ್ ಅಬ್ದುಲ್ ರವೂಫ್ ನಟಿಸಿರುವ ಮಾಣಿಕ್ಯ ಮಲರಾಯ ಪೂವಿ’ ಎಂಬ ಹಾಡು ವೈರಲ್ ಆಗ್ತಿದೆ. ಯೂಟ್ಯೂಬಿನಲ್ಲಿ ಬಿಡುಗಡೆಗೊಂಡ ಈ ಹಾಡು ಈಗ ಹತ್ತು ಮಿಲಿಯನ್ ವೀಕ್ಷಣೆ ಕಂಡಿದೆ.

ಈ ಹಾಡನ್ನು ಮಲಯಾಳಂನಿಂದ ಕನ್ನಡಕ್ಕೆ ಅನುಬವಾದಿಸಿದ್ದಾರೆ ನಮ್ಮ ಕವಿ, ಕಥೆಗಾರ ಸುನೈಫ್.  ‘ಮಾಣಿಕ್ಯ ಮಲರಾಯ ಪೂವಿ’ ಹಾಡು ಬರೆದ ಆಧುನಿಕ ಮಾಪಿಳ ಹಾಡುಗಳ ಮೇರು ಕವಿ PMA ಜಬ್ಬಾರ್ ಕರುಪಡನ್ನ ಈಗ ರಿಯಾದಿನಲ್ಲಿದ್ದಾರೆ. 1978ರಲ್ಲಿ ಬರೆದಿದ್ದ ಈ ಹಾಡನ್ನು ರಫೀಕ್ ತಲಶೇರಿ ಎಂಬ ಇನ್ನೊಬ್ಬ ಮಾಪಿಳ ಹಾಡುಗಾರ ಸಂಗೀತ ನೀಡಿ ಹಾಡಿದ್ದರು. ಆ ಕಾಲದಲ್ಲಿ ಆಕಾಶವಾಣಿ ಮತ್ತು ಕ್ಯಾಸೆಟ್’ಗಳ ಮೂಲಕ ಜನಮನ ಗೆದ್ದಿದ್ದ ಈ ಹಾಡು ಈಗ ಹುಬ್ಬಿನ ಹುಡುಗಿಯ ಮೂಲಕ ವೈರಲ್ ಆಗಿದೆ.

‘ಒರುಅಡಾರ್ ಲವ್’ ಎಂಬ ಸಿನಿಮಾದಲ್ಲಿ ಶಾನ್ ರಹ್ಮಾನ್ ಎಂಬ ಪ್ರತಿಭಾವಂತ ಸಂಗೀತಗಾರ ಹಾಡಿನ ಪುನರ್ ಆವಿಷ್ಕಾರಕ್ಕೆ ಇಳಿದು ಯಶ ಕಂಡಾಗಿದೆ. ಹಾಡನ್ನು ಹಾಡಾಗಿ, ಪ್ರೇಮವನ್ನು ಪ್ರೇಮವಾಗಿ, ಸಿನಿಮಾವನ್ನು ಸಿನಿಮಾ ಆಗಿ ನೋಡಿದರೇನೆ ಚೆಂದ ಎಂದು ಹೇಳುವ ಜಬ್ಬಾರ್ ವಿವಾದಗಳಿಗೆ ತಲೆ ಕೆಡಿಸಿಕೊಂಡವರಲ್ಲ.

ಮಾಣಿಕ್ಯ ಮಲರಾಯ ಪೂವಿ ಹಾಡಿನ ಭಾವಾನುವಾದ ಇಲ್ಲಿದೆ:

ಹೂವಾದಳು ಮುತ್ತರಳಿ ಮಹನೀಯಳು ಖದೀಜಾ ಬೀವಿ ಪಾವನ ಭೂಮಿ ಮಕ್ಕದಲ್ಲಿ ಬಾಳಿದಳು ರಾಣಿಯಂತೆ ಅಂತ್ಯ ದೂತರನ್ನು ಕರೆದು ವ್ಯಾಪಾರ ಒಪ್ಪಿಸುವ ಭರದಲ್ಲಿ ಪ್ರೇಮಾಂಕುರವಾಯಿತು ಮೊದಲ ನೋಟದಲ್ಲಿ ಮಾರಾಟದ ವಹಿವಾಟು ಮುಗಿಸಿ ಪ್ರಿಯ ಪ್ರವಾದಿ ಮರಳುವ ಹೊತ್ತು ಕಾತರಳಾಗಿರುವಳು ಬೀವಿ ಮದುವೆಯ ಹಂಬಲ ಹೊತ್ತು ಕರೆದಳು ತನ್ನ ಗೆಳತಿಯನ್ನು ಅರುಹಿದಳು ಮನದಿಚ್ಚೆಯನ್ನು ಕಳಿಸಿದಳು ಅಬೂತಾಲಿಬರನ್ನು ಬಳಿಗೆ ಮದುವೆಯ ಸಂಗತಿಯಿದು ಪಾರವಿಲ್ಲದ ಸಂತೋಷವಿದು ಅಬೂತಾಲಿಬರಿಗೆ ಒಪ್ಪಿತವಿದು ಬೀವಿ ಖದೀಜಾ ಮದುಮಗಳು ಮದುಮಗನ ಗತ್ತಿನಲ್ಲಿ ಅಂತ್ಯ ದೂತರು ಅವನಿಚ್ಚೆಯಂತೆ ಸೂರ್ಯನುದಿಸಿದನು ಮಾದರಿ ದಂಪತಿಗೆ ಮಂಗಳ ಕೋರಿದನು

ಮೂಲ ಮಲಯಾಳಂ: ಪಿ.ಎಂ.ಎ ಜಬ್ಬಾರ್ ಕರುಪಡನ್ನ ಕನ್ನಡ ಭಾವಾನುವಾದ: ಸುನೈಫ್

Facebook Auto Publish Powered By : XYZScripts.com