ವಿಮರ್ಶೆ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ : ‘ಸ್ಕ್ಯಾಮ್ ರಾಜ’ನ ಆಟ ಸಿಕ್ಕಾಪಟ್ಟೆ ಮಜಾ.. ಸ್ವಲ್ಪ ಕಿರಿಕಿರಿ..

”ನಮಸ್ಕಾರ.. ಡಿಯರ್ ಫ್ರೆಂಡ್ಸ್ ಐ ಆಮ್ ಯುವರ್ ಹಂಬಲ್ ಪೊಲಿಟಿಷಿಯನ್” ಹೀಗೆ ಹೇಳಿಕೊಂಡು ಚಿತ್ರಮಂದಿರಕ್ಕೆ ಇಂದು ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಬಂದೆ ಬಿಟ್ಟಿದ್ದಾರೆ. ಅಂದಹಾಗೆ, ಈ ಸಿನಿಮಾ ರಾಜಕೀಯ ವ್ಯವಸ್ಥೆಯ ಬಗ್ಗೆ ಇದೆ. ಹಾಗಂತ ಇಲ್ಲಿ ಉಪದೇಶ ಮಾಡಿಲ್ಲ. ಇದು ಪಕ್ಕಾ ಕಾಮಿಡಿ ಸಿನಿಮಾ. ಡ್ಯಾನಿಶ್ ಸೇಠ್ ನೋಡಿ ಇಷ್ಟ ಪಡುವವರಿಗೆ ಸಿನಿಮಾ ಪಕ್ಕಾ ಇಷ್ಟ ಆಗುತ್ತದೆ. ಯಾವುದೇ ತಲೆನೋವು ಇಲ್ಲದೆ ಎರಡು ಗಂಟೆ ನಕ್ಕು ಬರಬಹುದು. ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಅದ್ಬುತ ಅಲ್ಲದಿದ್ದರೂ ಕನ್ನಡದ ಒಂದು ಅಪರೂಪದ ಸಿನಿಮಾ.

ಸಿನಿಮಾ : ಹಂಬಲ್ ಪೊಲಿಟಿಷಿಯನ್ ನಾಗರಾಜ್

ನಿರ್ಮಾಣ: ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನ್, ಹೇಮಂತ್ ರಾವ್

ನಿರ್ದೇಶನ: ಸಾದ್ ಖಾನ್

ಛಾಯಾಗ್ರಹಣ : ಕರ್ಮ್ ಚಾವ್ಲ

ಸಂಕಲನ : ಜಗದೀಶ್

ಸಂಗೀತ: ಶ್ರೀಚರಣ್ ಪಕಲ

ತಾರಾಗಣ: ಡ್ಯಾನಿಶ್‌ ಸೇಠ್, ವಿಜಯ್ ಚಂಡೂರ್, ಸುಮುಕ್ತಿ ಸುರೇಶ್, ಶೃತಿ ಹರಿಹರನ್, ಮತ್ತಿತರರು.

ಬಿಡುಗಡೆ: ಜನವರಿ 12, 2018

‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಸಿನಿಮಾ ಸುತ್ತುವುದು ಒಬ್ಬ ಕಾರ್ಪೊರೇಟರ್ ನಾಗರಾಜ್ (ಡ್ಯಾನಿಶ್ ಸೇಠ್) ಸುತ್ತ. ಸಿನಿಮಾದ ಮೊದಲ ದೃಶ್ಯದಿಂದ ಶುರುವಾಗಿ ಕೊನೆಯ ದೃಶ್ಯದವರೆಗೆ ಈ ಕಾರ್ಪೋರೇಟರ್ ನಾಗರಾಜನ ತುಂಟಾಟ ತುಂಬಿಕೊಂಡಿದೆ. ಚಿಕ್ಕವಯಸ್ಸಿನಿಂದ ಒಬ್ಬ ಪೊಲಿಟಿಷಿಯನ್ ಆಗಬೇಕು ಎಂಬ ಕನಸು ಹೊಂದಿರುವ ನಾಗರಾಜ್ ಕಾರ್ಪೊರೇಟರ್ ಆಗಿರುತ್ತಾನೆ. ಕಾರ್ಪೊರೇಟರ್ ನಂತರ ಆತ ಎಂ.ಎಲ್.ಎ ಆಗುತ್ತಾನ… ಇಲ್ವಾ.. ಎನ್ನುವುದು ಸಿನಿಮಾದ ಕಥೆ.

ಕಾರ್ಪೊರೇಟರ್ ಆಗಿದ್ದ ನಾಗರಾಜ್ ಎಂ.ಎಲ್.ಎ ಆಗುವುದಕ್ಕೆ ಏನ್ನೆಲ್ಲ ಮಾಡುತ್ತಾನೆ ಎನ್ನುವುದನ್ನು ಇಡೀ ಸಿನಿಮಾದಲ್ಲಿ ಹಾಸ್ಯಮಯವಾಗಿ ಹೇಳಲಾಗಿದೆ. ಇದರ ಮಧ್ಯೆ ಆತನ ಪ್ರತಿಸ್ಪರ್ಧಿ ಆಗಿ ಚುನಾವಣಾ ಅಖಾಡಕ್ಕೆ ಅರುಣ್ ಪಾಟೀಲ್ ಬರುತ್ತಾನೆ. ಅವನನ್ನು ಸೋಲಿಸಲು ನಾಗರಾಜ್ ಮಾಡುವ ಮಾಸ್ಟರ್ ಪ್ಲಾನ್ ಏನು. ಈ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಚಿತ್ರದ ಕುತೂಹಲಕಾರಿ ಅಂಶ

ಸಿನಿಮಾ ಕನ್ನಡ ಮತ್ತು ಇಂಗ್ಲೀಷ್ ಸೇರಿ ಕಂಗ್ಲೀಷ್ ಆಗಿದೆ. ಆದರೆ ಅದು ನಟ ಡ್ಯಾನಿಶ್‌ ಸೇಠ್ ಮ್ಯಾನರಿಸಂ ಗೆ ತಕ್ಕಂತೆ ಇದೆ. ಇಡೀ ಸಿನಿಮಾದ ಜೀವಾಳ ಡ್ಯಾನಿಶ್‌ ಸೇಠ್. ಅವರು ಸಿನಿಮಾ ನೋಡೋಕ್ಕೆ ಬಂದ ಪ್ರೇಕ್ಷಕರಿಗೆ ಮಸ್ತ್ ಮಜಾ ನೀಡುತ್ತಾರೆ. ಒಂದು ಮಾತಿನಲ್ಲಿ ಹೇಳಬೇಕು ಅಂದರೆ ಡ್ಯಾನಿಶ್‌ ಸೇಠ್ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಸಿನಿಮಾಗೆ ಆಮ್ಲಜನಕ ಇದ್ದಂತೆ. ಸೋ, ಡ್ಯಾನಿಶ್‌ ಸೇಠ್ ನಟನೆ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ.

ಚಿತ್ರದಲ್ಲಿ ಡ್ಯಾನಿಶ್ ಸೇಠ್ ಅಭಿನಯದ ಬಗ್ಗೆ ಜಾಸ್ತಿ ಮಾತನಾಡುವ ಹಾಗೆ ಇಲ್ಲ. ಅವರ ಪತ್ನಿಯ ಪಾತ್ರ ಮಾಡಿರುವ ಸುಮುಕ್ತಿ ಸುರೇಶ್, ಪಿ.ಎ ಪಾತ್ರಧಾರಿ ವಿಜಯ್ ಚಂಡೂರ್ ಮತ್ತು ರೋಗರ್ ನಾರಾಯಣ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಶೃತಿ ಹರಿಯರನ್ ಅವರದ್ದು ಸಣ್ಣ ಪಾತ್ರವಾದರೂ ಅಚ್ಚುಕಟ್ಟಾಗಿದೆ. ಚಿತ್ರದ ವಿಶೇಷ ಪಾತ್ರದಲ್ಲಿ ಪುನೀತ್ ರಾಜ್ ಕುಮಾರ್ ಬಂದು ಹೋಗುತ್ತಾರೆ.

‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಮನರಂಜನೆಯನ್ನು ನಂಬಿಕೊಂಡು ಬಂದ ಪ್ರೇಕ್ಷಕರಿಗೆ ಮೋಸ ಮಾಡುವುದಿಲ್ಲ. ಸಿನಿಮಾ ನೋಡುವಾಗ ಕೆಲವು ಸಂದರ್ಭದಲ್ಲಿ ಸ್ವಲ್ಪ ಬೋರ್ ಆಗಬಹುದು. ಆದರೆ ಓವರ್ ಆಲ್ ಆಗಿ ಇದೊಂದು ಒಳ್ಳೆಯ ಎಂಟರ್ಟೈನಿಂಗ್ ಸಿನಿಮಾ.

ಈ ರೀತಿಯ ಸಿನಿಮಾ ಬಂದಾಗ ಕೆಲ ಸಣ್ಣ ತಪ್ಪುಗಳನ್ನು ಇದ್ದರೂ ಅದನ್ನು ಎತ್ತಿ ಹಿಡಿಯುವುದು ಅಷ್ಟು ಸರಿಯಲ್ಲ. ಯಾಕಾಂದ್ರೆ, ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಒಂದು ಒಳ್ಳೆಯ ಪ್ರಯತ್ನದ ಸಿನಿಮಾ. ಹೀರೋ.. ಹೀರೋಯಿನ್.. ಅವರಿಗೊಂದು ಲವ್.. ಜೊತೆಗೆ ಕುಣಿಯೋಕ್ಕೆ ಐದು ಹಾಡು… ಹೀಗೆ ಯಾವುದೇ ಕಮರ್ಶಿಯಲ್ ಅಂಶಗಳಿಗೆ ಜೋತು ಬೀಳದೆ ಮಾಡಿರುವ ಒಂದು ವಿಭಿನ್ನ ಸಿನಿಮಾ.

ಸಿನಿಮಾದಲ್ಲಿ ಸಾಧಾರಣವಾದ ಒಂದು ಹಾಡು ಇದೆ. ಬ್ಯಾಗ್ರೌಂಡ್ ಮ್ಯೂಸಿಕ್ ಮತ್ತು ಮೇಕಿಂಗ್ ಚೆನ್ನಾಗಿದೆ. ತಾಂತ್ರಿಕವಾಗಿ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಕ್ವಾಲಿಟಿ ಸಿನಿಮಾ.

ಅದೇ ರೀತಿಯ ಸಿನಿಮಾಗಳನ್ನು ನೋಡಿ ಬೋರ್ ಆದವರು.. ಕನ್ನಡದಲ್ಲಿ ವಿಭಿನ್ನ ಸಿನಿಮಾಗಳು ಬರುತ್ತಿಲ್ಲ ಎಂದು ಕೊರಗುವರು.. ಬೇರೆ ರೀತಿಯ ಕಥೆಯನ್ನು ನೋಡಲು ಇಷ್ಟ ಪಡುವವರು… ಅದಕ್ಕಿಂತ ಹೆಚ್ಚಾಗಿ ಮನಸಾರೆ ನಗಲು ಆಸೆ ಇರುವವರು ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಚಿತ್ರವನ್ನು ಆರಾಮಾಗಿ ನೋಡಬಹುದು.

Facebook Auto Publish Powered By : XYZScripts.com