ವಿಮರ್ಶೆ: ಭೂಗತ ಲೋಕಕ್ಕೆ ದೇಶಪ್ರೇಮದ ಪಾಠ ಹೇಳುವ ‘ಚಕ್ರವರ್ತಿ’

”ಕೆಟ್ಟ ಜಾಗದಲ್ಲಿ ಕೂತ್ಕೊಂಡು ಒಳ್ಳೆ ಕೆಲಸನೂ ಮಾಡಬಹುದು” – ಇದು ‘ಚಕ್ರವರ್ತಿ’ ಚಿತ್ರದ ಡೈಲಾಗ್ ಹೌದು… ‘ಚಕ್ರವರ್ತಿ’ ತುಳಿಯುವ ಹಾದಿಯೂ ಹೌದು… ಇಡೀ ಚಿತ್ರದ ಸಾರಾಂಶ ಕೂಡ ಹೌದು. ಭೂಗತ ಲೋಕದ ಕಥೆಯನ್ನ ವೈಭವೋಪೇತವಾಗಿ ‘ಚಕ್ರವರ್ತಿ’ ಮೂಲಕ ನಿಮ್ಮೆಲ್ಲರ ಮುಂದೆ ತಂದರೂ, ಅದರಲ್ಲಿ ದೇಶ ಪ್ರೇಮದ ಬೀಜ ಬಿತ್ತಿರುವ ನಿರ್ದೇಶಕ ಚಿಂತನ್ ರವರ ಜಾಣ್ಮೆ ಮೆಚ್ಚಬೇಕು.

ಚಿತ್ರ: ಚಕ್ರವರ್ತಿ
ನಿರ್ಮಾಣ: ಸಿದ್ಧಾಂತ್
ಕಥೆ-ಚಿತ್ರಕಥೆ-ನಿರ್ದೇಶನ: ಚಿಂತನ್.ಎ.ವಿ
ಸಂಗೀತ ನಿರ್ದೇಶನ: ಅರ್ಜುನ್ ಜನ್ಯ
ಛಾಯಾಗ್ರಹಣ: ಚಂದ್ರಶೇಖರ್.ಕೆ.ಎಸ್
ಸಂಕಲನ: ಕೆ.ಎಂ.ಪ್ರಕಾಶ್
ತಾರಾಗಣ: ದರ್ಶನ್, ದಿನಕರ್ ತೂಗುದೀಪ, ದೀಪಾ ಸನ್ನಿಧಿ, ಕುಮಾರ್ ಬಂಗಾರಪ್ಪ, ಆದಿತ್ಯ, ಸೃಜನ್ ಲೋಕೇಶ್, ಚಾರುಲತಾ ಮತ್ತು ಇತರರು.
ಬಿಡುಗಡೆ: ಏಪ್ರಿಲ್ 14, 2017

ಮಡಿಕೇರಿಯಲ್ಲಿ ‘ಸಿಪಾಯಿ’ ಪುತ್ರನಾಗಿ ಜನಿಸಿದ ಶಂಕರ್ (ದರ್ಶನ್)ಗೆ ನರಭಕ್ಷಕ ಹುಲಿಯನ್ನ ಬೇಟೆ ಆಡುವ ಹವ್ಯಾಸ. ಆ ಹವ್ಯಾಸ ಬಿಟ್ಟು ಜೀವನದಲ್ಲಿ ಸಾಧನೆ ಮಾಡಬೇಕು ಅಂತ ಅಪ್ಪನ ಮಾತಿಗೆ ಬೆಲೆ ಕೊಟ್ಟು ಬೆಂಗಳೂರಿಗೆ ಬರುವ ಶಂಕರ್ ಕಾಲಕ್ರಮೇಣ ಭೂಗತ ಲೋಕಕ್ಕೂ ಕಾಲಿಡುತ್ತಾನೆ.

ಬೆಂಗಳೂರಿಗೆ ಬರುವ ಶಂಕರ್ (ದರ್ಶನ್)ಗೆ ಭೂಗತ ಲೋಕದ ನಂಟು ಬೆಳೆಯುವುದು ಹೇಗೆ.? ಅಷ್ಟಕ್ಕೂ ‘ರೌಡಿಸಂ’ ಹಾದಿಯನ್ನ ಶಂಕರ್ ತುಳಿಯುವುದು ಯಾಕೆ.? ಎಂಬುದೇ ‘ಚಕ್ರವರ್ತಿ’ ಚರಿತ್ರೆ.! ಅದನ್ನ ನೀವೇ ಚಿತ್ರಮಂದಿರದಲ್ಲಿ ಕಣ್ತುಂಬಿಕೊಂಡರೆ ಚೆನ್ನ.

ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ಅದ್ಭುತ. ಗಂಭೀರ ಮುಖಭಾವ, ನಡೆಯುವ ಸ್ಟೈಲ್, ಕಿಲ್ಲಿಂಗ್ ಸ್ಮೈಲ್, ಸೂಪರ್ ಸ್ಟಂಟ್ಸ್… ಎಲ್ಲದರಲ್ಲೂ ದರ್ಶನ್ ‘ದಿ ಬೆಸ್ಟ್’. ಮೂರು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿರುವ ದರ್ಶನ್ ರವರನ್ನ ತೆರೆಮೇಲೆ ನೋಡುತ್ತಿದ್ದರೆ, ಅಭಿಮಾನಿಗಳಿಗೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ.!

‘ಡಾನ್’ ಮಹಾರಾಜ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಿನಕರ್ ತೂಗುದೀಪ ರವರ ನಟನೆ ಎಕ್ಸಲೆಂಟ್. ದಿನಕರ್ ನಟನೆ ನೋಡ್ತಿದ್ರೆ, ಕೆಲವೊಂದು ಸನ್ನಿವೇಶಗಳಲ್ಲಿ ದಿ.ತೂಗುದೀಪ ಶ್ರೀನಿವಾಸ್ ನೆನಪಾಗುತ್ತಾರೆ. ಅಷ್ಟರಮಟ್ಟಿಗೆ ‘ಖಡಕ್ ರೌಡಿ’ಯಾಗಿ ದಿನಕರ್ ಆರ್ಭಟಿಸಿದ್ದಾರೆ.

ಅಪ್ಪಟ ಗೃಹಿಣಿಯಾಗಿ ನಟಿ ದೀಪಾ ಸನ್ನಿಧಿ ನಟನೆ ಚೆನ್ನಾಗಿದೆ. ದರ್ಶನ್ ಹಾಗೂ ದೀಪಾ ಸನ್ನಿಧಿ ರವರ ಕೆಮಿಸ್ಟ್ರಿ ಕೂಡ ಆನ್ ಸ್ಕ್ರೀನ್ ನಲ್ಲಿ ವರ್ಕೌಟ್ ಆಗಿದೆ.

ಉಳಿದಂತೆ ಪೊಲೀಸ್ ಪಾತ್ರದಲ್ಲಿ ಆದಿತ್ಯ, ಶರತ್ ಲೋಹಿತಾಶ್ವ, ‘ಡಾನ್’ ಶೆಟ್ಟಿ ಪಾತ್ರದಲ್ಲಿ ಕುಮಾರ್ ಬಂಗಾರಪ್ಪ, ಚಾರುಲತಾ, ಸೃಜನ್ ಲೋಕೇಶ್, ಸಾಧು ಕೋಕಿಲ ತಮಗೆ ಕೊಟ್ಟ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

‘ಚಕ್ರವರ್ತಿ’ ಚಿತ್ರದ ಪ್ರತಿ ಫ್ರೇಮ್ ನಲ್ಲೂ ಶ್ರೀಮಂತಿಕೆ ತುಂಬಿ ತುಳುಕುತ್ತದೆ. 80-90ರ ದಶಕದಲ್ಲಿ ನಡೆಯುವ ಕಥೆಯಾದ್ರಿಂದ, ಅದಕ್ಕೆ ಬೇಕಾಗಿರುವ ಸೆಟ್ ವರ್ಕ್, ಕಾಸ್ಟ್ಯೂಮ್, ಹೇರ್ ಸ್ಟೈಲ್, ಕಾರುಗಳು… ಎಲ್ಲವೂ ಅಚ್ಚುಕಟ್ಟಾಗಿದೆ. 80-90 ರ ದಶಕದ ವಾತಾವರಣವನ್ನ ತೆರೆಮೇಲೆ ಕಟ್ಟಿಕೊಡುವಲ್ಲಿ ನಿರ್ದೇಶಕ ಚಿಂತನ್ ಯಶಸ್ವಿ ಆಗಿದ್ದಾರೆ. ನಿರ್ಮಾಪಕ ಸಿದ್ಧಾಂತ್ ಯಾವುದಕ್ಕೂ ಕಮ್ಮಿ ಮಾಡಿಲ್ಲ.

ಮಡಿಕೇರಿ, ಮೈಸೂರು, ಬ್ಯಾಂಕಾಕ್, ಮಲೇಶಿಯಾ ಸೇರಿದಂತೆ ಅನೇಕ ಕಣ್ಣು ಕೋರೈಸುವ ಸುಂದರ ತಾಣಗಳಲ್ಲಿ ‘ಚಕ್ರವರ್ತಿ’ಯ ಚಕ್ರಾಧಿಪತ್ಯವನ್ನ ಕ್ಯಾಮರಾಮ್ಯಾನ್ ಚಂದ್ರಶೇಖರ್ ಸುಂದರವಾಗಿ ಸೆರೆಹಿಡಿದಿದ್ದಾರೆ.

ಎಲ್ಲೋ ಕೇಳಿದಂತೆ ಭಾಸವಾದರೂ, ‘ಚಕ್ರವರ್ತಿ’ ಚಿತ್ರದ ಟೈಟಲ್ ಹಾಡು ಮತ್ತೆ ಮತ್ತೆ ಗುನುಗುವಂತೆ ಮಾಡುತ್ತದೆ. ‘ಚಕ್ರವರ್ತಿ’ ಥೀಮ್ ಮ್ಯೂಸಿಕ್ ಮತ್ತು ಬ್ಯಾಕ್ ಗ್ರೌಂಡ್ ಸ್ಕೋರ್ ಚಿತ್ರಕಥೆಗೆ ಪೂರಕವಾಗಿದೆ.

Courtesy: Filmibeat

Facebook Auto Publish Powered By : XYZScripts.com