ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.!

ತೆಲುಗಿನ ‘ಬಾಹುಬಲಿ-2’ ಚಿತ್ರದ ಅಬ್ಬರದಿಂದಾಗಿ ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಅಕ್ಷರಶಃ ಬಲಿ ಆಗುತ್ತಿವೆ. ‘ಬಾಹುಬಲಿ’ಯ ಬರುವಿಕೆಗಾಗಿ ರತ್ನಗಂಬಳಿ ಹಾಸಿರುವ ಕರ್ನಾಟಕದ ಚಿತ್ರಮಂದಿರಗಳು ಅಪ್ಪಟ ಕನ್ನಡ ನೆಲದ ಸಿನಿಮಾಗಳಿಗೆ ಗೇಟ್ ಪಾಸ್ ಕೊಟ್ಟಿವೆ. ಹೀಗಾಗಿ ‘ಬಾಹುಬಲಿ-2’ ಚಿತ್ರದಿಂದಾಗಿ ಕನ್ನಡ ‘ರಾಗ’ ಹಾಗೂ ‘ರಾಜಕುಮಾರ’ ಅನೇಕ ಥಿಯೇಟರ್ ಹಾಗೂ ಮಲ್ಟಿಪೆಕ್ಸ್ ಗಳಿಂದ ಎತ್ತಂಗಡಿ ಆಗಿದೆ.

ಒಂದೇ ವಾರಕ್ಕೆ ‘ರಾಗ’ ಚಿತ್ರ ಎತ್ತಂಗಡಿ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ, ನಿನ್ನೆಯಷ್ಟೇ ನಿರ್ದೇಶಕ ಪಿ.ಸಿ.ಶೇಖರ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವನ್ನ ಹೊರಹಾಕಿದ್ದರು.

‘ರಾಗ’ ಚಿತ್ರಕ್ಕೆ ಸಹಾಯ ಹಸ್ತ ಚಾಚಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಮಲ್ಟಿಪ್ಲೆಕ್ಸ್ ಗಳಲ್ಲಿ ‘ರಾಗ’ ಚಿತ್ರವನ್ನ ಪ್ರದರ್ಶನ ಮಾಡುವಂತೆ ಮನವಿ ಮಾಡಿದ್ರು. ಆದರೇನು ಪ್ರಯೋಜನ.? ಕರ್ನಾಟಕದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷರ ಮಾತಿಗೆ ನಿಜಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲ ಬಿಡಿ.! ಮುಂದೆ ಓದಿ….

”ಐನಾಕ್ಸ್, ಪಿ.ವಿ.ಆರ್, ಸಿನಿಪೊಲಿಸ್, ಗೋಪಾಲನ್ ಮಾಲ್, ಇಟಾ ಮಾಲ್ ಸೇರಿದಂತೆ ಎಲ್ಲರನ್ನೂ ಕೇಳಿಕೊಂಡಿದ್ದೇನೆ. ಎಲ್ಲರೂ, ‘ರಾಗ’ ಚಿತ್ರವನ್ನ ಪ್ರದರ್ಶನ ಮಾಡಲು ಒಪ್ಪಿಕೊಂಡಿದ್ದಾರೆ” ಎಂದು ಕೆ.ಎಫ್.ಸಿ.ಸಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದರು.

ಐನಾಕ್ಸ್, ಪಿ.ವಿ.ಆರ್, ಸಿನಿಪೊಲಿಸ್ ಸೇರಿದಂತೆ ಎಲ್ಲರಲ್ಲಿ ಮನವಿ ಮಾಡಿಕೊಂಡಿದ್ದರೂ, ‘ರಾಗ’ ಚಿತ್ರ ಪ್ರದರ್ಶನ ಆಗುತ್ತಿರುವುದು ಬೆಂಗಳೂರಿನ ಮೂರು ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ.

ಕಾರ್ನಿವಲ್: ರಾಕ್ ಲೈನ್ ಮಾಲ್, ಗೋಪಾಲನ್ ಸಿನಿಮಾಸ್: ಮೈಸೂರು ರಸ್ತೆ, ಗೋಪಾಲನ್ ಮಿನಿಪ್ಲೆಕ್ಸ್: ಮದ್ರಾಸ್ ರೋಡ್ ನಲ್ಲಿರುವ ಮಲ್ಟಿಪ್ಲೆಕ್ಸ್ ನಲ್ಲಿ ಮಾತ್ರ ‘ರಾಗ’ ಚಿತ್ರಕ್ಕೆ ಒಂದು ಶೋ ಫಿಕ್ಸ್ ಮಾಡಲಾಗಿದೆ.

ಮಲ್ಟಿಪ್ಲೆಕ್ಸ್ ನವರ ಬಳಿ ಎಷ್ಟೇ ಮನವಿ ಮಾಡಿದರೂ, ಆಗುತ್ತಿರುವ ಅನ್ಯಾಯ ನಿಲ್ಲದ ಕುರಿತು ‘ರಾಗ’ ಚಿತ್ರದ ನಿರ್ದೇಶಕ ಪಿ.ಸಿ.ಶೇಖರ್, ಮತ್ತೊಮ್ಮೆ ಫೇಸ್ ಬುಕ್ ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

”ರಾಗ’ ಚಿತ್ರಕ್ಕೆ ಥಿಯೇಟರ್ ಇಲ್ಲ ಅಂತಾದಾಗ, ನನ್ನ 14 ವರ್ಷಗಳ ಚಿತ್ರರಂಗದ ಬದುಕಿನಲ್ಲಿ ರೆಕಗ್ನಿಷನ್ ಸಿಗಲಿಲ್ಲವೇ ಎಂದು ಬೇಸರದಿಂದ ನುಡಿದಿದ್ದೆ. ಆದರೆ, ನಾನು ನೋವಿನಿಂದ ಮಾತಾಡಿದ್ದಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನೀವೆಲ್ಲಾ ತಕ್ಷಣ ಪ್ರತಿಕ್ರಿಯಿಸಿದ್ದನ್ನು ನೋಡಿ ನನ್ನ ಹೃದಯ ತುಂಬಿ ಬಂತು” – ಪಿ.ಸಿ.ಶೇಖರ್ , ನಿರ್ದೇಶಕ

”ನೀವೆಲ್ಲರೂ, ಮಾಧ್ಯಮ ಮತ್ತು ವಾಣಿಜ್ಯ ಮಂಡಳಿ ನೀಡಿದ ಬೆಂಬಲಕ್ಕೆ ನಾನು ಋಣಿ. ಇದರ ಪರಿಣಾಮ ‘ರಾಗ’ಕ್ಕೆ ಮತ್ತೆ ಜೀವ ಬಂತು ಅಂದುಕೊಂಡೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಸಾ.ರಾ.ಗೋವಿಂದು ವಿಶೇಷ ಕಾಳಜಿಯಿಂದ ಮಲ್ಟಿಪ್ಲೆಕ್ಸ್ ನಲ್ಲಿ ಕೆಲ ಶೋ ಕೊಡಿಸಿದರು. ಕಾರ್ನಿವಾಲ್, ಗೋಪಾಲನ್ ಮಾಲ್. ಗೋಪಾಲನ್ ಸಿನಿಮಾಸ್ ಗಳಲ್ಲಿ ಒಂದೊಂದು ಶೋ ಫಿಕ್ಸ್ ಆಯ್ತು” – ಪಿ.ಸಿ.ಶೇಖರ್ , ನಿರ್ದೇಶಕ

”ಆದರೆ, ಆಧ್ಯಕ್ಷರಿಗೆ ಮಾತು ಕೊಟ್ಟ ಐನಾಕ್ಸ್ ಮತ್ತು ಪಿವಿಆರ್, ಸಿನಿಪೊಲಿಸ್, ‘ರಾಗ’ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ. ಇವತ್ತು ಶೋ ಆಗಲಿಲ್ಲ ಅಂದ್ರೆ ಮತ್ತೆ ಇವರು ‘ರಾಗ’ ಪ್ರದರ್ಶಿಸೋದೇ ಇಲ್ಲ. ಇದು ನನ್ನಲ್ಲಿ ಆತಂಕವನ್ನುಂಟು ಮಾಡ್ತಿದೆ” – ಪಿ.ಸಿ.ಶೇಖರ್ , ನಿರ್ದೇಶಕ

”ನಿನ್ನೆ ಸಿಕ್ಕ ಭರವಸೆ ಕರಗಿ ಹೋಗ್ತಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷರ ಮಾತಿಗೆ ಬೆಲೆಯೇ ಇಲ್ಲವೇ? ಕನ್ನಡ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳ ಹಿತ ಕಾಪಾಡೋದ್ರಲ್ಲಿ ವಾಣಿಜ್ಯ ಮಂಡಳಿ ನ್ಯಾಯ ಮಂಡಳಿ ತರಹ ಕೆಲಸ ಮಾಡ್ತಿದೆ. ಹೀಗಿರುವಾಗ ಮಂಡಳಿಯನ್ನ ಮಲ್ಟಿಪ್ಲೆಕ್ಸ್ ಕೇರ್ ಮಾಡೋಲ್ಲ ಅಂದ್ರೆ ಮುಂದೆ ಬರೋ ಕನ್ನಡ ಚಿತ್ರಗಳನ್ನು ಕಾಪಾಡೋರು ಯಾರು?” – ಪಿ.ಸಿ.ಶೇಖರ್ , ನಿರ್ದೇಶಕ

ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಗಳ ದಬ್ಬಾಳಿಕೆಗೆ ಕಡಿವಾಣ ಎಂದು ಬೀಳುತ್ತೋ.!?

Facebook Auto Publish Powered By : XYZScripts.com