ರಣ ವಿಕ್ರಮ ನಿರ್ದೇಶಕರೊಂದಿಗೆ ಪುನೀತ್ ಮತ್ತೊಂದು ಚಿತ್ರ.. ಇಲ್ಲಿದೆ ಸಂಪೂರ್ಣ ಮಾಹಿತಿ
ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಇಲ್ಲೊಂದು ಸಿಹಿಸುದ್ದಿಯಿದೆ.ಪುನೀತ್ ಅವರ ಮುಂದಿನ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಾರೆ ಮತ್ತು ನಿರ್ಮಾಣ ರಾಕ್ ಲೈನ್ ವೆಂಕಟೇಶ್ ಅವರದ್ದು ಎಂಬ ಮಾತುಗಳು ಕೇಳಿಬರುತ್ತಿದ್ದವು. ಅದೀಗ ನಿಜವಾಗುತ್ತಿದ್ದು ಮಾರ್ಚ್ 5ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಅಂಜನಿಪುತ್ರ ಸಿನಿಮಾ ಬಿಡುಗಡೆಯಾದ ನಂತರ ಪುನೀತ್ ಯಾವುದೇ ಚಿತ್ರದ ನಟನೆಗೆ ಸಿನಿಮಾ ಸೆಟ್ ಗೆ ಬಂದಿರಲಿಲ್ಲ. ಫ್ಯಾಮಿಲಿ ಪವರ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದರು. ಮಾರ್ಚ್ 1ಕ್ಕೆ ಫ್ಯಾಮಿಲಿ ಪವರ್ ಶೂಟಿಂಗಾ ಮುಗಿಯುತ್ತದೆ.
ಪವನ್ ಒಡೆಯರ್ ಅವರ ಈ ಸಿನಿಮಾದಲ್ಲಿ ಆಕ್ಷನ್, ಮನರಂಜನೆ, ಕಾಮಿಡಿ ಹೀಗೆ ಪುನೀತ್ ಅಭಿಮಾನಿಗಳಿಗೆ ಇಷ್ಟವಾಗುವ ಎಲ್ಲಾ ಅಂಶಗಳು ಇರುತ್ತವೆ. ಚಿತ್ರದಲ್ಲಿ ಇ ಬ್ಬರು ಹೀರೋಯಿನ್ ಗಳಿರುತ್ತಾರೆ. ಚಿತ್ರತಂಡ ಇದೀಗ ನಾಯಕಿಯರ ಹುಡುಕಾಟದಲ್ಲಿ ತೊಡಗಿದೆ. ರಣ ವಿಕ್ರಮ ನಂತರ ಪವನ್ ಮತ್ತು ಪುನೀತ್ ಮತ್ತೆ ಒಂದಾಗುತ್ತಿದ್ದಾರೆ.
ಈ ಮಧ್ಯೆ ಇನ್ನೊಂದು ಆಸಕ್ತಿಕರ ವಿಷಯವನ್ನು ಚಿತ್ರತಂಡ ಹಂಚಿಕೊಂಡಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾ ದೇವಿ ಈ ಚಿತ್ರದ ಮೂಲಕ ಮತ್ತೆ ಮರಳುತ್ತಿದ್ದಾರೆ. ಕೆಲವು ಸುತ್ತಿನ ಮಾತುಕತೆ ನಂತರ ಸರೋಜಾದೇವಿ ಚಿತ್ರದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ.
80ರ ಹೊಸ್ತಿಲಿನಲ್ಲಿರುವ ಸರೋಜಾದೇವಿಯವರು ಸುಮಾರು 6 ದಶಕಗಳ ಕಾಲ ಸ್ಯಾಂಡಲ್ ವುಡ್ ಚಿತ್ರೋದ್ಯಮವನ್ನು ಆಳಿದವರು. ಅವರ ನಟನೆ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದರು. ರಾಜ್ ಕುಮಾರ್ ಮತ್ತು ಸರೋಜಾದೇವಿ ಜೋಡಿ ಶಾಸ್ತ್ರೀಯ ಕಥೆಗಳುಳ್ಳ ಚಿತ್ರಗಳ ನಟನೆಗೆ ಹೆಸರಾಗಿದ್ದರು.
ಗೌರವ ಡಾಕ್ಟರೇಟ್ ಮತ್ತು ಪದ್ಮ ಭೂಷಣ ಪಡೆದ ಸರೋಜಾದೇವಿಯವರು ರಾಜ್ ಕುಮಾರ್ ಅವರ ಮಗ ಪುನೀತ್ ಜೊತೆ ನಟಿಸಲು ಮುಂದಾಗಿದ್ದಾರೆ.