‘ಯೋಗಿ ದುನಿಯಾ’ ಚಿತ್ರ ವಿಮರ್ಶೆ

ನಿನ್ನೆ ರಿಲೀಸ್ ಆದ ಲೂಸ್ ಮಾದ ಯೋಗಿಶ್ ಅಭಿನಯದ ‘ಯೋಗಿ ದುನಿಯಾ’ ಸಿನಿಮಾ ನೋಡಿ ಜನ ಇಷ್ಟ ಪಟ್ಟಿದ್ದಾರೆ. ಜೂಜು, ಕುಡಿತ, ರೇಸ್, ಡೈಸ್, ಇಸ್ಪಿಟ್, ಬೆಟ್ಟಿಂಗ್ ಹೀಗೆ ಒಂದಲ್ಲ ಒಂದು ಚಟವನ್ನು ಮೈತುಂಬಿಕೊಂಡಿರುವ ವ್ಯಕ್ತಿಯನ್ನು ಅದೇ ಚಟ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವುದನ್ನು ಸಿನಿಮಾದ ಮೂಲಕ ಚೆನ್ನಾಗಿ ತೋರಿಸಿದ್ದಾರೆ. ”ಮನುಷ್ಯನಿಗೆ ಒಂದು ಚಟ ಇದ್ದರೆ ಅದು ಅವನನ್ನು ಚಟ್ಟಕ್ಕೆ ಕರೆದುಕೊಂಡು ಹೋಗುತ್ತದೆ” ಎನ್ನುವುದು ‘ಯೋಗಿ ದುನಿಯಾ’ ಸಿನಿಮಾದ ಒನ್ ಲೈನ್ ಸಂದೇಶವಾಗಿದೆ.

ಇನ್ನು ವಿಮರ್ಶಕರು ಸಹ ಯೋಗಿ ದುನಿಯಾ ನೋಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ”ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ಹೊರಬರುವುದು ಸುಲಭವಲ್ಲ ಎಂಬ ಸಂದೇಶ ಸಾರುವ ‘ಯೋಗಿ ದುನಿಯಾ’ ಚಿತ್ರ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕರಾಳಮುಖವನ್ನು ಅನಾವರಣಗೊಳಿಸುತ್ತದೆ.” ಎಂದು ಸಿನಿಮಾದ ಬಗ್ಗೆ ವಿಮರ್ಶಕರು ಹೇಳಿದ್ದಾರೆ.

ಅಂದಹಾಗೆ, ಕನ್ನಡದ ಜನಪ್ರಿಯ ದಿನ ಪತ್ರಿಕೆಗಳಲ್ಲಿ ಬಂದ ಯೋಗಿ ದುನಿಯಾ ಸಿನಿಮಾ ವಿಮರ್ಶೆ ಮುಂದಿದೆ ಓದಿ..

ಮೆಜೆಸ್ಟಿಕ್‌ನ ರಾತ್ರಿಗಳು
ದುನಿಯಾದೊಳಗಿದೆ ಹಸಿ ಹಸಿ ಕನಸು: ವಿಜಯ ಕರ್ನಾಟಕ

”ಸ್ಯಾಂಡಲ್ ವುಡ್‌ನ ನಿರ್ದೇಶಕರು ಈಗಾಗಲೇ ರಾಜಧಾನಿಯ ಗಲ್ಲಿ ಗಲ್ಲಿಗಳಲ್ಲಿಯೂ ಕ್ಯಾಮೆರಾ ಇಟ್ಟಿದ್ದಾರೆ. ಆದರೆ, ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್‌ ಎಂಬ ಮಾಯಾಲೋಕದ ಒಳಸುಳಿಯನ್ನು ಅಷ್ಟೊಂದು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿರಲಿಲ್ಲ. ಈಗ ‘ಯೋಗಿ ದುನಿಯಾ’ ಮೂಲಕ ಆ ಕೆಲಸವನ್ನೂ ಮಾಡಿದ್ದಾರೆ ನಿರ್ದೇಶಕ ಹರಿ. ದಿನದ 24 ಗಂಟೆಯೂ ಎಚ್ಚರವಿರುವ ಮೆಜೆಸ್ಟಿಕ್‌ನ ಮತ್ತೊಂದು ಮುಖವನ್ನು ಈ ಸಿನಿಮಾದಲ್ಲಿ ತೆರೆದಿಟ್ಟಿದ್ದಾರೆ. ಈ ಕಾರಣದಿಂದಾಗಿ ಈ ಚಿತ್ರ ಗಮನ ಸೆಳೆಯುತ್ತದೆ. ಗಾಂಧಿನಗರದ ಮಡಿಲಿನಲ್ಲಿ ಹಾಯಾಗಿರುವ ಮೆಜೆಸ್ಟಿಕ್‌ನ ರಾತ್ರಿಗಳು ಕೆಲವರಿಗೆ ಕಲರ್‌ಫುಲ್‌, ಇನ್ನೂ ಕೆಲವರಿಗೆ ಕರಾಳ. ಇವೆರಡೂ ಸಿನಿಮಾದ ಕಥಾವಸ್ತು. ಆತ ಕಥಾನಾಯಕ (ಯೋಗೀಶ್ ) ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವಂಥವನು. ಜತೆಗೆ ದಿಕ್ಕು ದೆಸೆಯಿಲ್ಲದವನು. ಮೆಜೆಸ್ಟಿಕ್‌ ಇವನ ಮನೆ. ನಾಯಕಿ ಶೀಲಾ (ಹಿತಾ ಚಂದ್ರಶೇಖರ್‌) ವೇಶ್ಯೆ. ಗಿರಾಕಿಗಾಗಿ ಈಕೆಯೂ ಮಜೆಸ್ಟಿಕ್‌ ಪ್ರದೇಶವನ್ನೇ ನಂಬಿಕೊಂಡಿರುತ್ತಾಳೆ. ಮೊದಲ ನೋಟದಲ್ಲಿಯೇ ನಾಯಕನಿಗೆ ಅವಳ ಮೇಲೆ ಲವ್‌ ಆಗುತ್ತದೆ. ಇಬ್ಬರೂ ಒಟ್ಟಿಗೆ ಬಾಳಲು ನಿರ್ಧರಿಸುತ್ತಾರೆ. ಆದರೆ, ಪರಿಸ್ಥಿತಿಗಳು ಅವರ ಕನಸುಗಳಿಗೆ ಸ್ಪಂದಿಸುವುದಿಲ್ಲ. ಅನೇಕ ಅಡೆತಡೆಗಳನ್ನು ಈ ಜೋಡಿ ಎದುರಿಸಬೇಕಾಗುತ್ತದೆ. ಅವುಗಳನ್ನು ಗೆಲ್ಲುತ್ತಾರಾ? ಸೋಲುತ್ತಾರಾ? ಎನ್ನುವುದೇ ಕ್ಲೈಮ್ಯಾಕ್ಸ್” – ಶರಣು ಹುಲ್ಲೂರು

 

ಸಂದೇಶ ಸಾರುವ ‘ಯೋಗಿ ದುನಿಯಾ’
ಬೆಟ್ಟಿಂಗ್ ವಿಷವರ್ತುಲದ ‘ದುನಿಯಾ’ – ಪ್ರಜಾವಾಣಿ

”ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ಹೊರಬರುವುದು ಸುಲಭವಲ್ಲ ಎಂಬ ಸಂದೇಶ ಸಾರುವ ‘ಯೋಗಿ ದುನಿಯಾ’ ಚಿತ್ರ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕರಾಳಮುಖವನ್ನು ಅನಾವರಣಗೊಳಿಸುತ್ತದೆ. ಈ ಸಿನಿಮಾದ ಪ್ರಥಮಾರ್ಧದಲ್ಲಿ ಬರೀ ಕುಡಿತ, ನಶೆ, ಅಕ್ರಮ ದಂಧೆಗಳ ಚಿತ್ರಣವೇ ವೈಭವೀಕರಿಸಲ್ಪಟ್ಟಿದೆ. ಆರಂಭದಲ್ಲಿ ಯಾವುದೇ ಜವಾಬ್ದಾರಿಯಿಲ್ಲದೆ ಮಾದಕ ವ್ಯಸನಗಳಿಗೆ ದಾಸನಾಗಿರುವ ನಾಯಕ, ಮುಂದೆ ತ್ಯಾಗಮಯಿ ಪ್ರೇಮಿಯಾಗಿ ಮನ ಗೆಲ್ಲುತ್ತಾನೆ. ಸಾಮಾಜಿಕ ಸಮಸ್ಯೆಯನ್ನು ಇಟ್ಟುಕೊಂಡು ಸಿನಿಮಾದ ಕಥೆ ಹೆಣೆದಿದ್ದರೂ ಅದನ್ನು ಪ್ರೇಕ್ಷಕರ ಮನಸ್ಸಿಗೆ ಮುಟ್ಟುವಂತೆ ನಿರೂಪಿಸುವಲ್ಲಿ ನಿರ್ದೇಶಕರು ಸೋತಿದ್ದಾರೆ ಎನ್ನಬಹುದು. ಬೆಂಗಳೂರಿನ ಮೆಜೆಸ್ಟಿಕ್ ರಾತ್ರಿ ಹೊತ್ತು ಹೇಗಿರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಸುಂದರವಾಗಿ ಚಿತ್ರೀಕರಿಸಲಾಗಿದೆ. ಅಲ್ಲಿ ನಡೆಯುವ ದಂಧೆಗಳು, ಅಕ್ರಮ ಚಟುವಟಿಕೆಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಕ್ರೌರ್ಯದ ಜೊತೆ ನವಿರಾದ ಪ್ರೇಮ ಕಥೆಯನ್ನು ಕಟ್ಟಿಕೊಡಲು ಯತ್ನಿಸಿದ್ದಾರೆ.

Facebook Auto Publish Powered By : XYZScripts.com