ಯಶಸ್ವಿಯಾಗಿ ಪ್ರಪಂಚ ಪರ್ಯಟನೆ ಮಾಡುತ್ತಿರುವ ‘ಚಮಕ್’

ಸ್ಯಾಂಡಲ್‍ವುಡ್‍ನಲ್ಲಿ ಭಾರೀ ಸದ್ದು ಮಾಡುತ್ತಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಚಮಕ್ ಚಿತ್ರ ವಿದೇಶಗಳಲ್ಲೂ ಕೂಡ ಹಾರಾಡುತ್ತಾ ಪರದೆ ಮೇಲೆ ವಿಜೃಂಭಿಸಿ ಉತ್ತಮ ಗಳಿಕೆಯನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಯುಎಸ್‍ಎ, ಕೆನಡಾದಲ್ಲಿ ಬಿಡುಗಡೆಗೊಂಡು ಶೇ.70ರಷ್ಟು ಯಶಸ್ಸು ಕಂಡಿದ್ದು , ಮುಂದಿನ ದಿನಗಳಲ್ಲಿ ಯುಕೆ, ಯೂರೋಪ್ , ದುಬೈ, ಮಸ್ಕತ್, ಕತಾರ್, ಸಿಂಗಾಪುರ್, ಮಲೇಷ್ಯಾ ಸೇರಿದಂತೆ ಆಸ್ಟ್ರೇಲಿಯಾದಲ್ಲೂ ಬಿಡುಗಡೆಗೆ ಸಿದ್ದತೆಗಳು ನಡೆಯುತ್ತಿವೆ. ಚಮಕ್ ತಂಡ ಚಿತ್ರದ ಯಶಸ್ಸಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ಕರೆದಿತ್ತು. ಸಿಂಪಲ್ ಸುನಿ ಅವರ ನಿರ್ದೇಶನ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಇದೇ ಮೊಲದ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ರಾಜ್ಯಾದ್ಯಂತ ಕನ್ನಡ ಪ್ರೇಕ್ಷಕರು ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ನೀಡಿರುವ ಬಗ್ಗೆ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಅವರು ಸಂತಸಗೊಂಡಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಮಾತನಾಡಿ, ಚಮಕ್ ನಮ್ಮ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಮೂಲಕ ನಿರ್ಮಾಣವಾಗಿರುವ ಮೊದಲ ಚಿತ್ರ. ಈ ಚಿತ್ರದ ಸಕ್ಸಸ್‍ನಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನಮ್ಮ ಚಿತ್ರವನ್ನು ತಲುಪಿಸುವ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ನಾನು ಸಿನಿಮಾರಂಗಕ್ಕೆ ಬರಲು ಮುಖ್ಯ ಕಾರಣ ನನ್ನ ಮಗ ವಿದ್ಯುತ್‍ಚಂದ್ರ, ಇದರಲ್ಲಿ ಆತನ ಕಾಟ್ರಿಬ್ಯೂಷನ್ ತುಂಬಾ ಇದೆ. ಸಾಫ್ಟ್‍ವೇರ್ ಕಂಪನಿ, ಲ್ಯಾಂಡ್ ಡೆವಲಪ್‍ಮೆಂಟ್ ಹಾಗೂ ಹೋಟೆಲ್ ಉದ್ಯಮ ಈ ಮೂರು ಬ್ಯುಸಿನೆಸ್‍ಗಳಲ್ಲಿ ತೊಡಗಿಕೊಂಡಿದ್ದ ನನಗೆ ಸಿನಿಮಾರಂಗ ಹೊಸದು. ಈಗಿನ ಕಾಲದಲ್ಲಿ ಒಂದು ಚಿತ್ರಮಾಡಿ ಅದನ್ನು ಯಶಸ್ವಿಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಅಂಥಾದ್ದರಲ್ಲಿ ನಮ್ಮ ಚಿತ್ರ ಜನರಿಗೆ ಹಿಡಿಸಿರುವುದು ಖುಷಿಯ ವಿಚಾರ. ಆರಂಭದಲ್ಲಿ ನಾನು ಸಿನಿಮಾ ಮಾಡಲು ಹೊರಟಾಗ ಚಿತ್ರರಂಗಕ್ಕೆ ಏಕೆ ಬಂದೆ ಎಂದು ಎಲ್ಲರೂ ಹೇಳಿದರು, ಆದರೆ ನನಗೆ ಎಲ್ಲಾ ಒಳ್ಳೆಯದೇ ಆಗಿದೆ. ವೈಕುಂಠ ಏಕಾದಶಿಯ ಪ್ರಸಾದವಾಗಿ ಈ ಚಿತ್ರದ ಯಶಸ್ಸನ್ನು ಕನ್ನಡ ಜನತೆ ನನಗೆ ಕೊಟ್ಟಿದ್ದಾರೆ. ನನ್ನ ಕನಸು ನನಸಾಗಿದೆ. ಗಡಿನಾಡು ದಾಟಿ ಪ್ರದರ್ಶನವಾಗುತ್ತಿರುವ ನಮ್ಮ ಸಿನಿಮಾ ಈಗ ಸಾಗರದಾಚೆಗೂ ಹೋಗಿದೆ. ಹೈದರಾಬಾದ್, ಚೆನ್ನೈ, ಅಹಮದಾಬಾದ್, ನೊಯಿಡಾ ಅಲ್ಲದೆ ಅಮೆರಿಕಾ, ಕೆನಡಾ ಸೇರಿದಂತೆ ಹೊರರಾಷ್ಟ್ರಗಳ ಮುವತ್ತಕ್ಕೂ ಹೆಚ್ಚು ಕೇಂದ್ರಗಳಲ್ಲಿ ಚಮಕ್ ಬಿಡುಗಡೆಯಾಗಿದೆ.

ಮುಂದಿನ ದಿನಗಳಲ್ಲಿ ಇನ್ನೂ ಅತ್ಯುತ್ತಮ ಚಿತ್ರಗಳನ್ನು ನಿರ್ಮಾಣ ಮಾಡುವ ಯೋಚನೆಯಿದೆ. ನಾನು ಹಾಕಿದ ಬಂಡವಾಳ ಬಂದಿದೆ. ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಎಷ್ಟು ಲಾಭ ಬಂದಿತೆಂಬುದರ ಬಗ್ಗೆ ಸಂಪೂರ್ಣ ಅಂಕಿ ಅಂಶಗಳನ್ನು ನೀಡುತ್ತೇನೆ. ನಮ್ಮ ಸಿನಿಮಾ 15 ಕೇಂದ್ರಗಳಲ್ಲಿ ನೂರು ದಿನ ಪೂರೈಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. ನಂತರ ನಾಯಕ ಗಣೇಶ್ ಮಾತನಾಡುತ್ತ ನಾನು ಈ ಕಥೆ ಕೇಳಿದಾಗ ನನಗೆ ಯಾವ ಫೀಲ್ ಆಯಿತೋ, ಅದೇ ಥರ ಸಿನಿಮಾ ನೋಡುತ್ತಿರುವ ಪ್ರೇಕ್ಷಕರಿಗೂ ಆಗುತ್ತಿದೆ. ಜನ ಚಿತ್ರವನ್ನು ಎಂಜಾಯ್ ಮಾಡುತ್ತಿದ್ದಾರೆ. ನನ್ನ ಅಭಿಮಾನಿಗಳೂ ತುಂಬಾ ಖುಷಿಯಾಗಿದ್ದಾರೆ ಎಂದು ಹೇಳಿದರು. ಚಿತ್ರದ ನಿರ್ದೇಶಕ ಸಿಂಪಲ್ ಸುನಿಲ್ ಮಾತನಾಡಿ, ನಮ್ಮ ಸಣ್ಣಸಣ್ಣ ತಪ್ಪುಗಳನ್ನು ಮುಚ್ಚಿಹಾಕಿ ಚಿತ್ರದ ಬಗ್ಗೆ ಎಲ್ಲರೂ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನ್ನ ನಿರ್ದೇಶನದ ಮೊದಲ ಅದ್ದೂರಿ ಸಿನಿಮಾವಿದು. ಎಲ್ಲರೂ ತುಂಬು ಸಹಕಾರವನ್ನು ನೀಡಿದ್ದಾರೆ ಹಾಗೂ ನಿರ್ಮಾಪಕರು ಪ್ರತಿ ಹಂತದಲ್ಲೂ ನನಗೆ ಬೆಂನ್ನೆಲುಬಾಗಿ ನಿಂತಿದ್ದರಿಂದ ಚಿತ್ರ ಸೊಗಸಾಗಿ ಮೂಡಿಬರಲು ಕಾರಣವಾಯಿತು ಎಂದು ಹೇಳಿದರು. ಉಳಿದಂತೆ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಕೂಡ ಮಾತನಾಡಿ, ಒಂದು ಉತ್ತಮ ತಂಡದೊಂದಿಗೆ ಕೆಲಸ ಮಾಡಿದ ಅನುಭವವಾಗಿದೆ. ಚಿತ್ರ ಯಶಸ್ಸಿನತ್ತ ಸಾಗುತ್ತಿದೆ. ನಿರಂತರವಾಗಿ ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಇರಲಿ ಎಂದು ಕೋರಿಕೊಂಡರು. ಒಟ್ಟಿನಲ್ಲಿ ಚಮಕ್ ಚಲ್ಲೊ ಎನ್ನುತ್ತ ಚಿತ್ರ ದೇಶವಿದೇಶದಲ್ಲೂ ಕೂಡ ತೆರೆಕಂಡು ಯಶಸ್ಸಿನ ನಾಗಲೋಟವನ್ನು ಮುಂದುವರೆಸಿದೆ.

Facebook Auto Publish Powered By : XYZScripts.com