ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದ ‘ಚಕ್ರವರ್ತಿ’

ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ್ ಆಗಿದ್ದಾರೆ. ಗುರುವಾರ ತಡರಾತ್ರಿಯಿಂದಲೇ ಆರಂಭವಾದ ‘ಚಕ್ರವರ್ತಿ’ ಭಾರೀ ಹೈಪ್ ಕ್ರಿಯೇಟ್ ಮಾಡಿದೆ.

ದರ್ಶನ್ ಗೆಟಪ್, ದಿನಕರ್ ತೂಗುದೀಪ ಖದರ್, ಅರ್ಜುನ್ ಜನ್ಯ ಮ್ಯೂಸಿಕ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಚಿಂತನ್ ನಿರ್ದೇಶನದ ಈ ಚಿತ್ರದಲ್ಲಿ ಬಹು ತಾರಾಗಣವೇ ಇದೆ. ಅಶೋಕ್, ಆದಿತ್ಯ, ಶರತ್ ಲೋಹಿತಾಶ್ವ, ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್, ಚಾರುಲತಾ ಮೊದಲಾದವರು ಅಮೋಘ ಅಭಿನಯ ನೀಡಿದ್ದಾರೆ.

ಅಭಿಮಾನಿಗಳು ಹುಚ್ಚೆದ್ದು ಸಿನಿಮಾ ವೀಕ್ಷಿಸಿದ್ದು, ಬಿಡುಗಡೆಯಾದಲ್ಲೆಲ್ಲಾ ‘ಚಕ್ರವರ್ತಿ’ ದರ್ಬಾರ್ ಜೋರಾಗಿದೆ. ದರ್ಶನ್ ಅಭಿಮಾನಿಗಳು ಮಾತ್ರವಲ್ಲದೇ, ಸಿನಿರಸಿಕರು ಕೂಡ ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದಾರೆ.

ಬೆಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಮಧ್ಯರಾತ್ರಿಯೇ ಪ್ರದರ್ಶನ ಆರಂಭವಾಗಿದ್ದು ವಿಶೇಷವಾಗಿತ್ತು.

‘ಚಕ್ರವರ್ತಿ’ ರಾಜ್ಯದ 400 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ, ಹೊರ ರಾಜ್ಯದ 50 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಂಡಿದೆ. ಮೂಲಗಳ ಪ್ರಕಾರ ಚಕ್ರವರ್ತಿ ಮೊದಲ ದಿನವೇ ಸುಮಾರು 9 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ಆದರೆ, ಬಂಡವಾಳ ಹೂಡಿದವರು ಮಾತ್ರ ಅಧಿಕೃತವಾಗಿ ಇನ್ನೂ ಮಾಹಿತಿ ನೀಡಿಲ್ಲ.

ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದ್ದ ‘ಚಕ್ರವರ್ತಿ’ ದರ್ಶನ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನೇ ತಂದಿದೆ. ಗಳಿಕೆಯಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ.

Courtesy: Kannada Duniya

Facebook Auto Publish Powered By : XYZScripts.com