ಮಾಸ್ತಿಗುಡಿ ಪತ್ರಿಕಾ ಗೋಷ್ಠಿಯಲ್ಲಿ ಸಾಧು ಕೋಕಿಲ ಸಿಟ್ಟಾಗಿದ್ದೇಕೆ??

ಸಾಮಾನ್ಯವಾಗಿ ಹೆಸರಿಗೆ ತಕ್ಕಂತೆ ಸಾಧು ಸ್ವಭಾವದ ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲಾ ಮಾಸ್ತಿಗುಡಿ ಪತ್ರಿಕಾಗೋಷ್ಟಿಯಲ್ಲಿ ಒಂಚೂರು ಸಿಟ್ಟು ಮಾಡಿಕೊಂಡಂತಿದ್ದರು. ಅದಕ್ಕೆ ಕಾರಣ ಮಾಸ್ತಿಗುಡಿಯಂಥಾ ಹೊಸಾ ಪ್ರಯೋಗದ ಚೆಂದದ ಚಿತ್ರದ ಬಗ್ಗೆ ಹರಡಿಕೊಂಡಿರೋ ಊಹಾಪೋಹಗಳು. ಅದ್ಯಾವುದೋ ಹುಲಿಯ ವಿಚಾರವನ್ನಿಟ್ಟುಕೊಂಡು ಇದರ ಕಥೆಯನ್ನೂ ಕೂಡಾ ಕದ್ದಿದ್ದೆಂದು ಪ್ರಚಾರ ಮಾಡುತ್ತಿರುವುದರ ವಿರುದ್ಧ ಸಾಧು ಫುಲ್ ಗರಂ ಮೂಡಿನಲ್ಲಿ ಮಾತಾಡಿದ್ದಾರೆ.ಚಿತ್ರವಿನ್ನೂ ಬಿಡುಗಡೆಯಾಗಿಲ್ಲ, ಅದನ್ನು ಯಾರೂ ನೋಡಿಲ್ಲ, ಆಗಲೇ ಹೇಗೆ ಇದು ಕದ್ದ ಕಥೆ ಅಂತ ನಿರ್ಧಾರ ಮಾಡುತ್ತೀರಿ ಎಂಬುದು ಸಾಧುಕೋಕಿಲಾರ ಪ್ರಶ್ನೆ. ಇದನ್ನವರು ಇಷ್ಟು ಅಧಿಕಾರಯುತವಾಗಿ ಕೇಳಲೂ ಕಾರಣವಿದೆ. ಯಾಕೆಂದರೆ ಈ ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ಅವರದ್ದೇ.

ಆದ್ದರಿಂದಲೇ ಅವರು ಇಡೀ ಚಿತ್ರವನ್ನು ನೋಡಿದ್ದಾರೆ. ಅದರ ಬಗ್ಗೆ ಬೆರಗಾಗಿದ್ದಾರೆ. ಈ ಚಿತ್ರ ಸೂಪರ್ ಹಿಟ್ಟಾಗೋದು ಗ್ಯಾರೆಂಟಿ ಅಂತಲೂ ಅವರಿಗನ್ನಿಸಿದೆ. ಹೀಗಿರೋದರಿಂದಲೇ ಈ ಚೆಂದದ ಚಿತ್ರದ ಬಗ್ಗೆ ಅಪಪ್ರಚಾರ ಮಾಡಬೇಡಿ, ಅದ್ಯಾವುದೋ ಬಾಹುಬಲಿ ಎಂಬ ತೆಲುಗು ಸಿನಿಮಾಗೆ ಆ ಪಾಟಿ ಪ್ರಚಾರ ಕೊಡೋ ಬದಲು ಮಾಸ್ತಿಗುಡಿಯಂಥಾ ಅಪ್ಪಟ ಕನ್ನಡ ಚಿತ್ರಗಳಿಗೂ ಪ್ರಚಾರ ಕೊಡಿ ಎಂಬ ಮನವಿಯನ್ನೂ ಸಾಧು ಕೋಕಿಲಾ ಮಾಡಿಕೊಂಡಿದ್ದಾರೆ. 

ಮಾಸ್ತಿಗುಡಿ ಚಿತ್ರದ ವಿಚಾರದಲ್ಲಿ ಒಂದಷ್ಟು ನೆಗೆಟಿವ್ ವಿಚಾರಗಳೇ ನಡೆಯುತ್ತಿದ್ದವಲ್ಲಾ? ಇಂಥಾ ಸಂದರ್ಭದಲ್ಲಿ ಸಂಗೀತ ನಿರ್ದೇಶಕರಾಗಿ ಸಾಧು ಕೋಕಿಲಾ ನಿಕ್ಕಿಯಾದೇಟಿಗೆ ಅವರು ಕೈಗೆ ಸಿಕ್ಕಂತೆಯೇ, ಈ ಚಿತ್ರದ ಮ್ಯೂಸಿಕ್ಕು ಮುಗಿದಂತೆಯೇ ಅಂತ ಒಂದಷ್ಟು ಮಂದಿ ಕುಹಕವಾಡಿದ್ದರಂತೆ. ಆದರೆ ಇದೆಲ್ಲವನ್ನೂ ಮೀರಿ ಸಾಧು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆಂಬುದು ಚಿತ್ರತಂಡದ ಮೆಚ್ಚುಗೆ. ಅದಕ್ಕೆ ಕಾರಣ ಈ ಚಿತ್ರದ ಅಂದಗಾರಿಕೆ ಎಂಬುದು ಸಾಧು ಕೋಕಿಲಾ ವಿವರಣೆ!

Facebook Auto Publish Powered By : XYZScripts.com