ಮಾರಿಮುತ್ತು ಉಪೇಂದ್ರ ಅವರಿಗೆ ಸಿಕ್ಕ ಸ್ವಾರಸ್ಯಕರ ಸುದ್ದಿ ಇಲ್ಲಿ ಓದಿ

‘ಉಪೇಂದ್ರ’ ಸಿನಿಮಾದ ಮಾರಿಮುತ್ತು ಪಾತ್ರದಲ್ಲಿ ನಟಿಸಿದ್ದ ಪೋಷಕ ನಟಿ ಸರೋಜಮ್ಮ ಅವರ ಬಗ್ಗೆ ಮೊಮ್ಮಗಳು ನಟಿ ಜಯಶ್ರೀ ಆರಾಧ್ಯ ಮಾತನಾಡಿದ್ದಾರೆ.

ಕೆಲವೊಂದು ಸಿನಿಮಾದ ಕೆಲವು ಪಾತ್ರಗಳು ಪ್ರೇಕ್ಷಕರ ಮನಸಿನಲ್ಲಿ ಸದಾ ಉಳಿಯುತ್ತದೆ. ಕೆಲವು ಕಲಾವಿದರನ್ನು ಜನ ಅವರ ಪಾತ್ರಗಳು ಮೂಲಕ ಗುರುತಿಸುತ್ತಾರೆ. ಅಂತಹ ಒಂದು ಪಾತ್ರ ಮಾರಿಮುತ್ತು. ‘ಉಪೇಂದ್ರ’ ಸಿನಿಮಾದಲ್ಲಿ ಬರುವ ಈ ಮಾರಿಮುತ್ತು ಪಾತ್ರ ಒಬ್ಬ ದೊಡ್ಡ ನಾಯಕಿಯ ಪಾತ್ರವಲ್ಲ. ಆದರೂ ಜನ ಇಂದಿಗೂ ಆ ಪಾತ್ರವನ್ನು ಮರೆತಿಲ್ಲ.

ಮಾರಿಮುತ್ತು ಪಾತ್ರ ಮಾಡಿದ್ದ ಹಿರಿಯ ಪೋಷಕ ನಟಿ ಸರೋಜಮ್ಮ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ ಆಸೆಯನ್ನು ಈಡೇರಿಸಲು ಅವರ ಮೊಮ್ಮಕ್ಕಳು ಚಿತ್ರರಂಗಕ್ಕೆ ಬಂದಿದ್ದಾರೆ. ಜಯಶ್ರೀ ಆರಾಧ್ಯ ಈಗ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾ ‘ಪುಟ್ಟರಾಜು ಲವರ್ ಆಫ್ ಶಶಿಕಲಾ’ ಬಗ್ಗೆ ಮಾತನಾಡಿದ ಅವರು ತಮ್ಮ ಅಜ್ಜಿ ಸರೋಜಮ್ಮ ಅವರ ಸಿನಿಮಾ ಎಂಟ್ರಿಯ ಹಿಂದೆ ಇದ್ದ ಯಾರಿಗೂ ತಿಳಿಯದ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಎನ್ನುವುದು ನೋಡುವುದಕ್ಕೆ ಚೆನ್ನಾಗಿ ಇರುವವರಿಗೆ ಮಾತ್ರ ಅಂತ ನಟಿ ಸರೋಜಮ್ಮ ಅಂದುಕೊಂಡಿದ್ದರಂತೆ. ಅದೇ ಕಾರಣಕ್ಕೆ ಅವರು ಒಂದು ಸರ್ಕಾರಿ ಕೆಲಸದಲ್ಲಿ ಇದ್ದರು. ನಟನೆ ಬಗ್ಗೆ ಅವರಿಗೆ ಯಾವುದೇ ಅನುಭವ ಇರಲಿಲ್ಲ. ನಿಜ ಹೇಳಬೇಕು ಅಂದರೆ ಸಿನಿಮಾ ಅವರನ್ನು ಹುಡುಕಿಕೊಂಡು ಬಂತೆ ವಿನಹಃ ಅವರು ಸಿನಿಮಾ ಹುಡುಕಿಕೊಂಡು ಹೋಗಿರಲಿಲ್ಲ. ಸರೋಜಮ್ಮ ಅವರು ಆಗ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಇರುವಾಗ ಮೂರು ಜನ ಹುಡುಗರು ಅವರನ್ನು ದಿನ ಫಾಲೋ ಮಾಡುತ್ತಿದ್ದರಂತೆ. ಯಾರು ಈ ಹುಡುಗರು ಅಂತ ಸರೋಜಮ್ಮ ಭಯ ಪಟ್ಟಿದ್ದರಂತೆ. ಆದರೆ ಆ ಹುಡುಗರನ್ನು ಕಳುಹಿಸಿದ್ದು ನಟ ಉಪೇಂದ್ರ ಅವರಂತೆ.

ಮೊದಲು ಮಾರಿಮುತ್ತು ಪಾತ್ರಕ್ಕೆ ರಿಯಲ್ ರೌಡಿ ಯನ್ನು ಹಾಕುವ ಪ್ಲಾನ್ ಉಪ್ಪಿ ಮಾಡಿದ್ದರಂತೆ. ಆದರೆ ಕಾರಣಾಂತರಗಳಿಂದ ಅದು ಆಗಲಿಲ್ಲ. ಆಗ ಯಾರೋ ಒಮ್ಮೆ ಉಪ್ಪಿಗೆ ಸರೋಜಮ್ಮ ಫೋಟೋ ತೋರಿಸಿ ಇವರು ಮಾರಿಮುತ್ತು ಪಾತ್ರಕ್ಕೆ ಸೂಟ್ ಆಗುತ್ತಾರೆ ಅಂತ ಹೇಳಿದ್ದರಂತೆ. ಉಪೇಂದ್ರ ಫೋಟೋ ನೋಡಿ ಈ ಪಾತ್ರಕ್ಕೆ ಇವರೇ ಬೇಕು ಎಂದು ತೀರ್ಮಾನ ಮಾಡಿದರಂತೆ. ನಮ್ಮ ಸಿನಿಮಾದಲ್ಲಿ ನಟಿಸಿ ಎಂದಾಗ ಸರೋಜಮ್ಮ ಇದೆಲ್ಲ ಸುಳ್ಳು ಎಂದು ತಿಳಿದಿದ್ದರಂತೆ. ಆದರೆ ಉಪೇಂದ್ರ ಅವರನ್ನು ಭೇಟಿ ಮಾಡಿದ ನಂತರ ಸಿನಿಮಾದಲ್ಲಿ ಅಭಿನಯಲು ಸರೋಜಮ್ಮ ಒಪ್ಪಿಕೊಂಡರಂತೆ.

ಆಮೇಲೆ ‘ಉಪೇಂದ್ರ’ ಸಿನಿಮಾ ಸೂಪರ್ ಹಿಟ್ ಆಯ್ತು. ಸಿನಿಮಾದ ಸರೋಜಮ್ಮ ಪಾತ್ರ ನೋಡಿ ಎಲ್ಲರೂ ಬೆರಗಾದರು. ಸರೋಜಮ್ಮ ಅವರ ಇಡೀ ಕುಟುಂಬ ಸಿನಿಮಾ ನೋಡಿ ಮೆಚ್ಚಿಕೊಂಡರು. ಈ ಚಿತ್ರದ ಮೂಲಕ ಸರೋಜಮ್ಮ ಅವರಿಗೆ ಹೆಚ್ಚು ಹೆಚ್ಚು ಸಿನಿಮಾ ಅವಕಾಶಗಳು ಸಿಕ್ಕವು.

 

Facebook Auto Publish Powered By : XYZScripts.com