ಮತ್ತೆ ಮನ್ವಂತರ ಹುಟ್ಟಿಸುತ್ತಾ ಟಿ.ಎನ್ ಸೀತಾರಾಮ್ ಅವರ ಕಾಫಿ ತೋಟ?

ಸಾಮಾಜಿಕ ಕಾಳಜಿಯ ಸದಭಿರುಚಿಯ ಚಿತ್ರಗಳು ಮತ್ತು ಧಾರಾವಾಹಿಗಳ ಮೂಲಕವೇ ಮನೆ ಮಾತಾಗಿರುವ ನಿರ್ದೇಶಕ ಟಿ.ಎನ್ ಸೀತಾರಾಂ ಮತ್ತೆ ಮರಳಿದ್ದಾರೆ. ‘ಕಾಫಿ ತೋಟ ಎಂಬ ಚಿತ್ರ ನಿರ್ದೇಶನದ ಮೂಲಕ ಮತ್ತೆ ಅವರು ಸಿನಿಮಾ ಮೂಲಕ ಮಾತಾಡಲು ಮುಂದಾಗಿದ್ದಾರೆ!

ಅಷ್ಟಕ್ಕೂ ಸೀತಾರಾಂ ಅವರು ಬಹುಕಾಲದಿಂದಲೂ ಸಿನಿಮಾ ನಿರ್ದೇಶನ ಮಾಡಲು ತಯಾರಿ ಮಾಡಿಕೊಳ್ಳುತ್ತಲೇ ಬಂದಿದ್ದರು. ಆದರೆ ಈಗ್ಗೆ ಒಂದೆರಡು ವರ್ಷಗಳ ಹಿಂದಿದ್ದ ಚಿತ್ರರಂಗದ ಅಲೆ, ವಾತಾವರಣ ಅವರನ್ನು ಹಿಂದೇಟು ಹಾಕುವಂತೆ ಮಾಡಿತ್ತು. ತೀರಾ ಅವರೊಂದಿಗೆ ಹತ್ತಾರು ವರ್ಷಗಳಿಂದ ಒಡನಾಡಿರುವ, ಒಟ್ಟಿಗೆ ಕೆಲಸ ಮಾಡಿರುವವರು ಮತ್ತು ಹತ್ತಿರದ ಸ್ನೇಹಿತರೇ ‘ಇದು ನಿಮ್ಮಂಥವರು ಸಿನಿಮಾ ಮಾಡುವಂಥಾ ವಾತಾವರಣವಲ್ಲ, ತುಸು ತಡೆಯಿರಿ ಎಂಬಂಥಾ ಕಿವಿ ಮಾತನ್ನೂ ಹೇಳಿದ್ದರು. ಅದನ್ನು ಮನ್ನಿಸುತ್ತಲೇ ಮುಂದುವರೆದ ಸೀತಾರಾಂ ಎರಡ್ಮೂರು ಚೆಂದದ ಕಥೆಗಳನ್ನೂ ಮಾಡಿಟ್ಟುಕೊಂಡಿದ್ದರು.
ಇದೀಗ ಚಿತ್ರರಂಗದಲ್ಲಿ ಹೊಸಾ ಅಲೆ ಚಾಲ್ತಿಯಲ್ಲಿದೆ. ಪ್ರೇಕ್ಷಕರು ಹೊಸಾ ಬಗೆಯ ಕಥೆ ಹೊಂದಿರೋ ಚಿತ್ರಗಳನ್ನು ಅಪ್ಪಿಕೊಳ್ಳುತ್ತಿದ್ದಾರೆ. ಕಥೆಯೇ ಇಲ್ಲದೆ ರೀಲು ಸುತ್ತುವ ಜಮಾನಾ ಮುಗಿದು ಕಂಟೆಂಟ್ ಇದ್ದರೆ ಮಾತ್ರ ಗೆಲ್ಲ ಬಹುದೆಂಬ ವಾತಾವರಣ ಹರಡಿಕೊಂಡಿದೆ. ಈ ಸುಸಂದರ್ಭದಲ್ಲಿ ಸೀತಾರಾಂ ತಮ್ಮ ಬತ್ತಳಿಕೆಯ ಒಂದು ಕಥೆಯನ್ನು ಹೊರ ತೆಗೆದು ಪ್ರಯೋಗಕ್ಕಿಳಿದಿದ್ದಾರೆ. ಅದೀಗ ಕಾಫಿ ತೋಟವಾಗಿ ಹದಗೊಳ್ಳುತ್ತಿದೆ!
ಕಾಫಿತೋಟ ಎಂಬ ಹೆಸರು ಮೇಲು ನೋಟಕ್ಕೆ ಸಾದಾಸೀದವಾಗಿ ಕಂಡರೂ ಅದರೊಳಗೊಂದು ಪ್ರಕೃತಿ ಸಹಜವಾದ ನಿಗೂಢವಿದೆ. ಈ ಕಥೆಯೂ ಅದಕ್ಕೆ ಪೂರಕವಾಗಿರೋದರಿಂದ, ಅಪ್ಪಟ ಕನ್ನಡದ ಹೆಸರೇ ಇಡಬೇಕೆಂಬ ಉತ್ಸುಕತೆಯಿಂದ ಈ ಹೆಸರು ಆಯ್ಕೆಯಾಗಿದೆಯಂತೆ.
ಅಂದಹಾಗೆ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ರಘು ಮುಖರ್ಜಿ ಮತ್ತು ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ಅಭಿನಯಿಸುತ್ತಿದ್ದಾರೆ. ಮನುಷ್ಯ ಮತ್ತು ಕಾಲದ ಮೂರು ಮುಖಗಳ ನಿಗೂಢಗಳ ಅನಾವರಣ ಈ ಚಿತ್ರ ಅಂತ ಒಂದೇ ಮಾತಲ್ಲಿ ವಿವರಣೆ ಕೊಡುವ ಮೂಲಕವೇ ಸೀತಾರಾಂ ಅವರು ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗುವಂತೆ ಮಾಡಿದ್ದಾರೆ. ಕಥೆ ಏರಿರಬಹುದೆಂಬ ಸಕಾರಾತ್ಮಕ ಚರ್ಚೆಯ ಹುಟ್ಟಿಗೂ ಶ್ರೀಕಾರ ಬರೆದಿದ್ದಾರೆ.
ಅವರೇ ಹೇಳಿರುವಂತೆ ಇದೊಂದು ನಿಗೂಢ ಕಥೆಯ ರೋಚಕ ಕಮರ್ಶಿಯಲ್ ಚಿತ್ರ. ಯಾವುದೇ ಸಂದೇಶವನ್ನು ದಾಟಿಸುವ ಉದ್ದೇಶದಿಂದ ಇದನ್ನು ಮಾಡಿಲ್ಲ. ಮನೋರಂಜನೆಯನ್ನ ದೃಷ್ಟಿಯಲ್ಲಿಟ್ಟುಕೊಂಡೇ ಕಥೆ ಹೆಣೆಯಲಾಗಿದೆ.
ಇದೀಗ ಭರದಿಂದ ಚಿತ್ರೀಕರಣ ನಡೆಯುತ್ತಿರುವ ಈ ಚಿತ್ರದ ಬಗ್ಗೆ ಭಾರೀ ಕೌತುಕ ಇದ್ದೇ ಇದೆ. ಸೀತಾರಾಂ ಅವರ ಚಿತ್ರವೆಂದ ಮೇಲೆ ಕುತೂಹಲ ಇದ್ದೆ ಇರುತ್ತೆ. ಆದರೆ ಈ ಸಲ ‘ಕಾಫಿ ತೋಟದ ವಿಚಾರದಲ್ಲಿ ಅದರ ಕಾವು ಗಣನೀಯವಾಗಿ ಎರಿಕೊಂಡಿದೆ!

Facebook Auto Publish Powered By : XYZScripts.com