‘ಬಿಲ್ ಗೇಟ್ಸ್’ ಅವತಾರದಲ್ಲಿ ಬರಲಿದ್ದಾರೆ ಚಿಕ್ಕಣ್ಣ

ಮೈಕ್ರೋಸಾಪ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಕನ್ನಡದಲ್ಲೊಬ್ಬ ಬಿಲ್ ಗೇಟ್ಸ್ ಬರುತ್ತಿದ್ದಾನೆ.

ಹಾಗಂತಾ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ಗೂ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲವಂತೆ. ಬಿಲ್ಗೇಟ್ಸ್ ರೀತಿ ಸಾಧನೆ ಮಾಡಬೇಕೆಂದು ಪುಟ್ಟ ಹಳ್ಳಿಯಿಂದ ಪಟ್ಟಣಕ್ಕೆ ಬರುವ ಹುಡುಗರ ಕಥೆ ಇದು. ಅವರಿಗೆ ಬಿಲ್ಗೇಟ್ಸ್ ಸ್ಫೂರ್ತಿಯಷ್ಟೆ. ಇಬ್ಬರು ನಾಯಕರು ತಮ್ಮ ಆಸೆಯನ್ನು ಪೂರೈಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ಕಥೆಯ ತಿರುಳು ಎನ್ನುತ್ತಾರೆ ನಿರ್ದೇಶಕರಾದ ಸಿ. ಶ್ರೀನಿವಾಸ .

‘ಸೊಸೆ’, ‘ಕುಲವಧು’ ಧಾರಾವಾಹಿಗಳಿಂದ ಪರಿಚಿತರಾದ ಶಿಶಿರ ಶರ್ಮ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ಚಿಕ್ಕಣ್ಣ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೋಜಾ ಮತ್ತು ಮೇಘನಾ ಅಪ್ಪಯ್ಯ ನಾಯಕಿಯರು. ರೋಜಾಗೆ ಇದು ನಾಲ್ಕನೇ ಚಿತ್ರವಾದರೆ ಮೇಘನಾಗೆ ಮೂರನೇ ಚಿತ್ರವಾಗಿದೆ.

ನೋಬಿನ್ ಪಾಲ್ ಸಂಗೀತದಲ್ಲಿ ನಾಲ್ಕು ಹಾಡುಗಳಿವೆ. ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಜಯ ಮಲ್ಲಿಕಾರ್ಜುನ ಸಂಭಾಷಣೆ ಚಿತ್ರಕ್ಕಿದೆ. ಕುರಿಪ್ರತಾಪ, ಯತಿರಾಜ್ ಮತ್ತು ವಿದೇಶಿ ಹುಡುಗ-ಹುಡುಗಿ ತಾರಾಗಣದಲ್ಲಿದ್ದಾರೆ.

ಶ್ರೀ ಪಾಂಚಜನ್ಯ ಕ್ರಿಯೇಷನ್ ಅಡಿಯಲ್ಲಿ ಎಂಟು ಸ್ನೇಹಿತರು ಸೇರಿಕೊಂಡು ಈ ಸಿನಿಮಾಕ್ಕೆ ಹಣ ಒದಗಿಸುತ್ತಾ ಇದ್ದಾರೆ.

ಈಗಾಗಲೇ ಚಿಕ್ಕಣ್ಣ ಹಾಸ್ಯದ ಪಾತ್ರಗಳಲ್ಲಿ ಅಭಿನಯಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದು, ಇದೀಗ ಮತ್ತೊಮ್ಮೆ ಪ್ರಮುಖ ಪಾತ್ರದ ಚಿತ್ರವೊಂದರಲ್ಲಿ ನಟಿಸುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

Facebook Auto Publish Powered By : XYZScripts.com