ಬಹಿರಂಗವಾಯ್ತು ರಜನಿಯ ‘ಕಾಳ’ ಚಿತ್ರದ ರಿಲೀಸ್ ಡೇಟ್

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷೆಯ ‘ಕಾಳ’ ಚಿತ್ರದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ರಜನಿಕಾಂತ್ ಅವರ ಅಳಿಯ ಧನುಷ್ ಶನಿವಾರದಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ‘ಕಾಳ’ ಬಿಡುಗಡೆಯ ದಿನವನ್ನು ಘೋಷಿಸಿದ್ದಾರೆ.

ರಜನಿಕಾಂತ್ ಅವರ ಈ ಹಿಂದಿನ ಸೂಪರ್ ಹಿಟ್ ಚಿತ್ರ ‘ಕಬಾಲಿ’ ಯ ಮುಂದುವರೆದ ಭಾಗವೇ ‘ಕಾಳ’ ಚಿತ್ರವೆಂದು ಹೇಳಲಾಗುತ್ತಿದ್ದು, ಈ ಚಿತ್ರವನ್ನೂ ಪ. ರಂಜಿತ್ ರವರೇ ನಿರ್ದೇಶಿಸುತ್ತಿದ್ದಾರೆ. ಧನುಷ್ ಅವರ ವಂಡರ್ಬಾರ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹುಮಾ ಖುರೇಷಿ, ನಾನಾ ಪಾಟೇಕರ್ ಪ್ರಮುಖ ತಾರಾಂಗಣದಲ್ಲಿದ್ದಾರೆ.

ಏಪ್ರಿಲ್ 27 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿರುವ ಧನುಷ್, ಜೊತೆಗೆ ಮತ್ತೊಂದು ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ತಯಾರಾಗುತ್ತಿರುವ ‘ಕಾಳ’ ಚಿತ್ರ ಸಿನಿಮಾ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ. ಕಥೆಯ ಕಾರಣಕ್ಕಾಗಿ ಚಿತ್ರ ವಿವಾದಕ್ಕೂ ಒಳಗಾಗಿದ್ದು, ಇದು ತಮ್ಮ ತಂದೆಯ ಜೀವನಾಧರಿತ ಚಿತ್ರವಾಗಿದೆ ಎಂದು ಮುಂಬೈ ಡಾನ್ ಆಗಿದ್ದ ಹಾಜಿ ಮಸ್ತಾನ್ ರ ಪುತ್ರ ತಕರಾರು ತೆಗೆದಿದ್ದರು. ಆದರೆ ನಿರ್ಮಾಪಕರು ಇದನ್ನು ಅಲ್ಲಗಳೆದಿದ್ದರು.

Facebook Auto Publish Powered By : XYZScripts.com