ಬಹಿರಂಗವಾಗಿ ಕನ್ನಡಿಗರ ಕ್ಷಮೆಯಾಚಿಸಿದ ಸತ್ಯರಾಜ್

ಬೆಂಗಳೂರು: ಒಂಬತ್ತು ವರ್ಷಗಳ ಹಿಂದೆ ಕಾವೇರಿ ಗಲಭೆಗಳಾಗಿದ್ದಾಗ ಕನ್ನಡಿಗರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ತಮಿಳು ನಟ ಸತ್ಯರಾಜ್ ಕೊನೆಗೂ ಕನ್ನಡಿಗರ ಹೋರಾಟಕ್ಕೆ ತಲೆಬಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಭಾರತದ ಬಹುನಿರೀಕ್ಷಿತ ಬಾಹುಬಲಿ 2 ಚಿತ್ರ ಕರ್ನಾಟದಲ್ಲಿ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಕನ್ನಡಿಗರನ್ನು ತುಚ್ಛವಾಗಿ ಕಂಡು ಅವಹೇಳನಕಾರಿಯಾಗಿ ಮಾತನಾಡಿದ್ದ ಸತ್ಯರಾಜ್ ಕನ್ನಡಿಗರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬಾಹುಬಲಿ 2 ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿದ್ದವು. ಇದೀಗ ಕನ್ನಡಿಗರ ಹೋರಾಟಕ್ಕೆ ಮಣಿದಿರುವ ಬಾಹುಬಲಿ ಚಿತ್ರದ ಪಾತ್ರಧಾರಿ ಕಟ್ಟಪ್ಪ ಬಹಿರಂಗವಾಗಿ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ.

“ಒಂಬತ್ತು ವರ್ಷಗಳ ಹಿಂದೆ ಕಾವೇರಿ ಗಲಭೆಗಳಾಗಿದ್ದಾಗ ನಾನು ಕನ್ನಡಿಗರ ವಿರುದ್ಧ ಹೇಳಿಕೆ ನೀಡಿದ್ದೆ. ನನ್ನ ಮಾತುಗಳು ಕನ್ನಡಿಗರನ್ನು ನೋಯಿಸಿದ್ದವೆಂದು ನನಗೀಗ ಅರ್ಥವಾಗಿದೆ. ಅದಕ್ಕಾಗಿ ನಾನು ಕನ್ನಡಿಗರ ಕ್ಷಮೆ ಕೋರುತ್ತೇನೆ.” . ಬಾಹುಬಲಿ 2 ಚಿತ್ರದಲ್ಲಿ ನಾನೊಬ್ಬ ಪಾತ್ರಧಾರಿಯಷ್ಟೇ ಇದರಿಂದ ಚಿತ್ರದ ಬಿಡುಗಡೆಗೆ ತೊಂದರೆಯಾಗುವುದು ಬೇಡ. ಚಿತ್ರದ ಬಿಡುಗಡೆಗೆ ಕನ್ನಡಿಗರು ಅವಕಾಶ ಮಾಡಿಕೊಡಬೇಕು ಎಂದು ತಾನು ಮಾತನಾಡಿರುವ ವಿಡಿಯೋವನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸತ್ಯರಾಜ್  ಹರಿಬಿಟ್ಟಿದ್ದಾರೆ.

Courtesy: News Kannada

Facebook Auto Publish Powered By : XYZScripts.com