ಬಂಗಾರ ಸನ್ ಒಫ್ ಬಂಗಾರದ ಮನುಷ್ಯ ಕೂಡ ಹಿಟ್ ಆಗುತ್ತಾ?

ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಬಂಗಾರ ಸನ್ನಾಫ್ ಬಂಗಾರದ ಮನುಷ್ಯ ಚಿತ್ರವೂ ಪುನೀತ್ ಅವರ ‘ರಾಜಕುಮಾರದಂತೆಯೇ ಭಾರೀ ಗೆಲುವೊಂದಕ್ಕೆ ರೂವಾರಿಯಾಗಲಿದೆಯಾ? ಇಂಥಾದ್ದೊಂದು ಚರ್ಚೆ ಈಗ ಎಲ್ಲೆಡೆ ಹರಿದಾಡುತ್ತಿದೆ!ಕನ್ನಡ ಚಿತ್ರರಂಗದಲ್ಲಿ ಲಕ್ಕಿ ವಿತರಕರೆಂದೂ ಹೆಸರುವಾಸಿಯಾಗಿರುವ ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ಯೋಗಿ. ಚಿತ್ರದ ಕಥೆ ಏನು ಎಂಬುದರಿಂದ ಹಿಡಿದು ಪ್ರತಿಯೊಂದರಲ್ಲಿಯೂ ಸಸ್ಪೆನ್ಸ್ ಕಾಯ್ದಿಟ್ಟುಕೊಂಡಿರೋ ಚಿತ್ರತಂಡ ಆ ಮೂಲಕವೇ ಮತ್ತಷ್ಟು ಕುತೂಹಲದ ಕಾವೇರುವಂತೆ ಮಾಡಿದ್ದಾರೆ.

ಆದರೆ, ಇದೀಗ ಭಾರೀ ಯಶ ಕಂಡು ಸೂಪರ್ ಹಿಟ್ ಆಗಿರುವ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರಕ್ಕೂ ಸನ್ನಾಫ್ ಬಂಗಾರದ ಮನುಷ್ಯ ಚಿತ್ರಕ್ಕೂ ಲಿಂಕು ಹಾಕಿ ಚರ್ಚೆಯಾಗುತ್ತಿರೋದಕ್ಕೆ ಕಾರಣಗಳೂ ಇದ್ದಾವೆ.

ರಾಜಕುಮಾರ ಚಿತ್ರ ಕೂಡಾ ಸದ್ದಿಲ್ಲದೇ ಚಿತ್ರೀಕರಣ ಪೂರೈಸಿಕೊಂಡಿತ್ತು. ಉದ್ದೇಶ ಪೂರ್ವಕವಾದ ಯಾವ ಹೈಪುಗಳೂ ಇರಲಿಲ್ಲ. ಈ ಚಿತ್ರದಲ್ಲಿಯೂ ರಾಜ್ಕುಮಾರ್ ಅವರನ್ನು ನೆನಪಿಸುವಂಥಾ ಒಂದಷ್ಟು ವಿಚಾರಗಳನ್ನಿಡಲಾಗಿತ್ತು. ಸನ್ನಾಫ್ ಬಂಗಾರ ಚಿತ್ರದಲ್ಲಿಯೂ ರಾಜ್ ಜಮಾನದಲ್ಲಿ ನಟಿಸುತ್ತಿದ್ದ ಕಲಾವಿದರ ದಂಡೇ ನಟಿಸಿದೆ. 

ಶಿವರಾಮಣ್ಣ, ಸದಾಶಿವ ಭ್ರಹ್ಮಾವರ, ಶ್ರೀನಾಥ್, ಹೊನ್ನವಳ್ಳಿ ಕೃಷ್ಣ, ಶಾಂತಮ್ಮ, ಜಯಮ್ಮ ಮುಂತಾದ ಹಿರಿಯ ನಟ ನಟಿಯರೂ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಷ್ಟಕ್ಕೂ ಮುಹೂರ್ತವನ್ನೂ ಸರಳವಾಗಿಯೇ ನೆರವೇರಿಸಿಕೊಂಡಿದ್ದ ಈ ಚಿತ್ರಕ್ಕೆ ಸದ್ದಿಲ್ಲದೆ ಚಿತ್ರೀಕರಣ ಆರಂಭಿಸಲಾಗಿತ್ತು. ಅದೀಗ ಅಂತಿಮ ಹಂತ ತಲುಪಿದೆ. ಇನ್ನೇನು ತೆರೆಗೆ ಬರಲು ಮುಹೂರ್ತ ಹುಡುಕೋ ಕೆಲಸವೂ ಚಾಲ್ತಿಯಲ್ಲಿದೆ.

ಜಯಣ್ಣ ಮತ್ತು ಭೋಗೇಂದ್ರ ಅವರು ಕೈಯಿಟ್ಟ ಚಿತ್ರಗಳೆಲ್ಲ ಯಶ ಕಾಣುತ್ತವೆಂಬಂಥಾ ವಾತಾವರಣವಿದೆ. ಇದರ ಜೊತೆಗೆ ಯೋಗಿಯವರ ಭಿನ್ನ ಕಥಾ ಹಂದರದ ನಿರ್ದೇಶನ ಹಾಗೂ ಡಾ.ರಾಜ್ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರದ ಹೆಸರೂ ಜೊತೆಯಾಗಿರೋದರಿಂದ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಗಳೆದ್ದಿವೆ.

Facebook Auto Publish Powered By : XYZScripts.com