‘ಪ್ರೇಮ ಬರಹ’ ಚಿತ್ರದ ಬಗ್ಗೆ ಏನಂತಾರೆ ವಿಮರ್ಶಕರು?

ಸುಮಾರು ಎರಡು ವರ್ಷಗಳಿಂದ ಭಾರಿ ಕುತೂಹಲ ಮೂಡಿಸಿದ್ದ ‘ಪ್ರೇಮ ಬರಹ’ ಸಿನಿಮಾ ತೆರೆಕಂಡಿದೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಕನ್ನಡದಲ್ಲಿ ಅಭಿನಯಿಸಿದ ಮೊದಲ ಚಿತ್ರ ಇದಾಗಿದ್ದು, ಸ್ಯಾಂಡಲ್ ವುಡ್ ಪ್ರೇಕ್ಷಕರು ಅದ್ಧೂರಿ ಸ್ವಾಗತ ಮಾಡಿದ್ದಾರೆ.

ಕನ್ನಡ ಚಿತ್ರರಸಿಕರು ಸಿನಿಮಾ ನೋಡಿ ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸರ್ಜಾ ಮಗಳು ಹಾಗೂ ಚಂದನ್ ಅಭಿನಯಕ್ಕೆ ಫುಲ್ ಮಾರ್ಕ್ಸ್ ಎನ್ನುತ್ತಿದ್ದಾರೆ. ನಿರ್ದೇಶಕ ಅರ್ಜುನ್ ಸರ್ಜಾ ಕೆಲಸಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾಗಿದ್ರೆ, ಅಭಿಮಾನಿಗಳು ಮೆಚ್ಚಿಕೊಂಡ ‘ಪ್ರೇಮ ಬರಹ’ವನ್ನ ವಿಮರ್ಶಕರು ಒಪ್ಪಿಕೊಂಡ್ರಾ? ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ‘ಪ್ರೇಮ ಬರಹ’ ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ವಿಮರ್ಶೆ ಬರೆದಿದೆ. ಚಿತ್ರದ ಬಗ್ಗೆ ವಿಮರ್ಶಕರು ಏನಂದ್ರು? ಏನಿಷ್ಟ ಆಯ್ತು, ಏನು ಇಷ್ಟ ಆಗಿಲ್ಲ ಎಂದು ತಿಳಿಯಲು ಮುಂದೆ ಓದಿ…

”1999ರಲ್ಲಿ ನಡೆಯುವ ಕಥೆ ಸಿನಿಮಾದಲ್ಲಿದೆ. ತೀರಾ ಸೀದಾ ಸಾದಾ ಸ್ಟೋರಿ ಸಿನಿಮಾದಲ್ಲಿದೆ. ಹಾಗಾಗಿ ಚಿತ್ರಕತೆಯಲ್ಲಿ ಹೆಚ್ಚು ಕೆಲಸವಾಗಬೇಕಿತ್ತು. ಚಿತ್ರಕಥೆ ಹೆಣೆಯುವಲ್ಲಿ ಸೋತಿ ಅರ್ಜುನ್ ನಿರ್ದೇಶಕರಾಗಿ ಇಷ್ಟವಾಗುತ್ತಾರೆ. ಅಪ್ಪನ ನಿರ್ದೇಶನದಲ್ಲಿ ಐಶ್ವರ್ಯಾ ಸೊಗಸಾಗಿ ಕಾಣುತ್ತಾರೆ. ನಟನೆ, ಡಾನ್ಸ್, ಎಕ್ಸ್ಪ್ರೆಶನ್ಸ್ ಎಲ್ಲದರಲ್ಲೂ ಬೆಸ್ಟ್. ಚಂದನ್ ಕೂಡ ಫೈಟ್ಸ್, ಡಾನ್ಸ್ ಎಲ್ಲದರಲ್ಲೂ ಉತ್ತಮ ಸ್ಕೋರ್ ಮಾಡಿದ್ದಾರೆ. ಸಿನಿಮಾದಲ್ಲಿ ಒಂದಷ್ಟು ನ್ಯೂನ್ಯತೆಗಳಿದ್ದರೂ ವಲ್ಗಾರಿಟಿಗೆ ಅವಕಾಶ ಕೊಡದೆ, ಐಟಂ ಸಾಂಗ್ ತುರುಕದೇ ಒಂದೊಳ್ಳೆ ಫ್ಯಾಮಿಲಿ ಮನರಂಜನೆಯ ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಹಾಗಾಗಿ ಒಮ್ಮೆ ನೋಡಲು ಅಡ್ಡಿಯಿಲ್ಲ” – ವಿಜಯ ಕರ್ನಾಟಕ

”ಮೊದಲರ್ಧದಲ್ಲಿ ಪ್ರೇಕ್ಷಕರ ಮನತಣಿಸುವಂತಿರುವ ‘..ಬರಹ’, ದ್ವಿತೀಯಾರ್ಧದಲ್ಲಿ ಹೆಚ್ಚು ಗಂಭೀರ ಸ್ವರೂಪ ಪಡೆದುಕೊಂಡಿದೆ. ಜತೆಗೆ ಸೇರಿಕೊಂಡಿರುವ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಕ್ಲೈಮ್ಯಾಕ್ಸ್ ವೇಳೆಗೆ ಕುತೂಹಲದ ಮೈಲೇಜ್ ಹೆಚ್ಚಿಸಿದೆ. ಯುದ್ಧದ ಸನ್ನಿವೇಶಗಳು ಮೈನವಿರೇಳಿಸುವಂತಿವೆ. ಆದರೆ ನಡುವೆ ಬಳಕೆ ಆಗಿರುವ ಹಳೇ ಫೂಟೇಜ್​ಗಳು ತುರುಕಿದಂತಿವೆ. ನಟನೆ ಮತ್ತು ಆಕ್ಷನ್ ಎರಡರಲ್ಲಿಯೂ ಚಂದನ್ ಶ್ರಮ ಗೋಚರಿ ಸುತ್ತದೆ. ಐಶ್ವರ್ಯಾ ಅವರದ್ದು ಚಂದದ ಅಭಿನಯ. ತರ್ಕ ಬದಿಗಿಟ್ಟು ಎಂಜಾಯ್ ಮಾಡುವಂತಿದ್ದರೆ ಕೌಟುಂಬಿಕ ಪ್ರೇಕ್ಷಕರಿಗೆ ‘ಪ್ರೇಮ ಬರಹ’ ಹೆಚ್ಚು ಇಷ್ಟ ಆಗುತ್ತದೆ” – ವಿಜಯವಾಣಿ

”ಚಟಪಟ ಮಾತಾಡುವ ಹುಡುಗಿ, ರಸ್ತೆ, ಓಣಿ, ಮನೆ, ಕಿಟಕಿ, ಟೆರೇಸುಗಳ ಮೇಲೆಲ್ಲ ಸೂಪರ್ಮ್ಯಾನ್ ರೀತಿಯಲ್ಲಿ ಜಿಗಿಯುತ್ತ ಖಳರಿಂದ ತಪ್ಪಿಸಿಕೊಳ್ಳುವ ಚುರುಕು ಹುಡುಗ, ಜತೆಗೆ ನೆಂಚಿಕೊಳ್ಳಲು ಒಂದಿಷ್ಟು ಹೊಸತೆನಿಸುವ ಹಾಸ್ಯ, ಮತ್ತಿಷ್ಟು ಭಾವುಕತೆ, ನಾಯಕ ನಾಯಕಿಯರ ಮಧ್ಯೆ ಮಜಕೊಡುವ ಜಗಳ… ಈ ಎಲ್ಲವೂ ಈಗಾಗಲೇ ಯಾವ್ಯಾವುದೋ ಸಿನಿಮಾಗಳಲ್ಲಿ ನೋಡಿದಂಥವೇ. ‘ಇನ್ನೇನು ಆ ಹುಸಿಜಗಳವೇ ಪ್ರೀತಿಯಾಗಿ ಬದಲಾಗುತ್ತದೆ, ವಿಧಿ ಅವರ ಪ್ರೇಮಕ್ಕೆ ಅಡ್ಡಗಾಲಾಗುತ್ತದೆ. ಕೊನೆಯಲ್ಲಿ ಅಡೆತಡೆ ದಾಟಿ ಒಂದಾಗುತ್ತಾರೆ’ ಎಂದು ಸುಲಭವಾಗಿ ಊಹಿಸುವಷ್ಟು ಈ ಬಗೆಯ ಕಥೆಗಳು ಈಗಾಗಲೇ ಬಂದು ಹೋಗಿವೆ. ಈ ಚಿತ್ರದಲ್ಲಿಯೂ ಹಾಗೆಯೇ ಆಗುತ್ತದೆ. ಆದರೆ ಆ ಸಾರ್ವತ್ರಿಕ ಎಳೆಯನ್ನು ಕೊಂಚ ಬಾಗಿಸಿ ದೇಶಭಕ್ತಿಯ ತಿರುವೊಂದನ್ನು ಇಟ್ಟು, ಇನ್ನೊಂದಿಷ್ಟು ಸುತ್ತಾಡಿಸಿ ತುದಿ ಮುಟ್ಟಿಸುತ್ತಾರೆ ನಿರ್ದೇಶಕ ಅರ್ಜುನ್ ಸರ್ಜಾ” – ಪ್ರಜಾವಾಣಿ

Facebook Auto Publish Powered By : XYZScripts.com