ಪರಿಪೂರ್ಣ ಗೆಲುವು ದಾಖಲಿಸಿದ ರಾಜಕುಮಾರ

ಪರಿಪೂರ್ಣ ಗೆಲುವೆಂದರೆ ಇದು. ಹೀಗಂತ ಜನ ಒಕ್ಕೊರಲ ಅಭಿಪ್ರಾಯ, ಅಭಿಮಾನ ವ್ಯಕ್ತಪರಿಸುತ್ತಿರೋದು ಪುನೀತ್ ರಾಜ್ಕುಮಾರ್ ಅವರ ‘ರಾಜ್ಕುಮಾರ ಚಿತ್ರದ ಬಗ್ಗೆ!

ಒಂದು ಸಿನಿಮಾ ಬಿಡುಗಡೆಯಾದೇಟಿಗೆ ಕಲೆಕ್ಷನ್ನಿನ ಬಗ್ಗೆ ಸುಳ್ಳು ಪಸರಿಸುವ ಸ್ಕ್ಟ್ರಿಫ್ಟು, ಸ್ಕ್ರೀನ್ ಪ್ಲೇಯನ್ನೂ ರೆಡಿ ಮಾಡಿಟ್ಟುಕೊಳ್ಳುವ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಪರಿಪೂರ್ಣ ಎಂಬಂಥಾ ಗೆಲುವು ಕಂಡ ಚಿತ್ರಗಳನ್ನು ಕಂಡಿದ್ದು ವಿರಳ. ಇಂಥಾ ಸನ್ನಿವೇಷದಲ್ಲಿ ರಾಜಕುಮಾರನದ್ದು ನಿಸ್ಸಂದೇಹವಾಗಿ ಭರ್ಜರಿ ಗೆಲುವೆಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ರಾಜಕುಮಾರ ಚಿತ್ರದ ಅಂತರಾಳ ಕುಟುಂಬ ಸಮೇತವಾಗಿ ಪ್ರೇಕ್ಷಕರನ್ನು ಥೇಟರಿಗೆ ಕರೆದುಕೊಂಡು ಬರುವಂತಿದೆ ಅಂತ ಆರಂಭದಲ್ಲಿಯೇ ಸಿನಿಬಜ಼್ ವರದಿ ಮಾಡಿತ್ತು. ಅದೀಗ ಅಕ್ಷರಶಃ ನಿಜವಾಗಿದೆ. ಪ್ರೇಕ್ಷಕರು ದಿನೇ ದಿನೇ ಕುಟುಂಬ ಸಮೇತರಾಗಿ ರಾಜಕುಮಾರನ ದರ್ಶನ ಪಡೆದು ಪುಳಕಗೊಳ್ಳುತ್ತಿದ್ದಾರೆ. ಹೀಗೆ ನೋಡಿ ತೃಪ್ತರಾದವರ ಮೆಚ್ಚುಗೆಯೇ ಮತ್ತಷ್ಟು ಜನ ಚಿತ್ರ ನೋಡುವಂತೆಯೂ ಮಾಡುತ್ತಿದೆ. ಇದು ಯಾವುದೇ ಚಿತ್ರವೊಂದರ ಸಹಜ ಗೆಲುವಿನ ಲಕ್ಷಣ.

ಸಾಮಾನ್ಯವಾಗಿ ಬರೀ ಬಿಲ್ಡಪ್ ಹೊಂದಿರೋ ಚಿತ್ರಗಳು ಒಂದೆರಡು ದಿನ ಅಬ್ಬರದಲ್ಲಿ ಸದ್ದು ಮಾಡುತ್ತವೆ. ಬಿಡುಗಡೆಯ ಪೂರ್ವದಲ್ಲಿ ಒಂದಷ್ಟು ಪ್ರಚಾರದ ಬಿಲ್ಡಪ್ ಕೂಡಾ ಕಟ್ಟುಮಸ್ತಾಗಿಯೇ ಕೊಡೋದರಿಂದ ಅದೇನೋ ಕ್ರಾಂತಿಯೇ ಆಗಿ ಬಿಡುತ್ತದೆ ಎಂಬಂಥಾ ವಾತಾವರಣವೂ ಸೃಷ್ಟಿಯಾಗಿರುತ್ತದೆ. ಆದರೆ ಇಂಥಾ ಚಿತ್ರಗಳ ಜನಕರು ಮಾಧ್ಯಮಗಳ ಮುಂದೆ ಒಣ ಜಂಭ ತೋರಿಸಿ ಎದ್ದು ಬರುವ ಹೊತ್ತಿಗೆಲ್ಲ ಚಿತ್ರವೆಂಬುದು ಥೇಟರುಗಳಿಂದಲೇ ಎಗರಿ ಬಿದ್ದಿರುತ್ತದೆ. ಆದರೂ ಕೆಲ ಮಂದಿ ಇಂಥಾ ಚಿತ್ರಗಳನ್ನು ಕಷ್ಟಪಟ್ಟು ಗೆದ್ದಿದೆ ಅಂತ ನಿರೂಪಿಸಲು ಹೆಣಗಾಡುತ್ತಾರೆ.

ಆದರೆ ರಾಜಕುಮಾರ ಚಿತ್ರದ ವಿಚಾರದಲ್ಲಿ ಅಂಥಾ ಫೇಕು ಬಿಲ್ಡಪ್ಪಾಗಲಿ, ಸುಳ್ಳಿನ ಸರಮಾಲೆಯಾಗಲೀ ಇಲ್ಲ. ಇದರ ಗೆಲುವಿಗೆ ಪ್ರೇಕ್ಷಕರೇ ಬೆರಗಾಗಿದ್ದಾರೆ. ಪುನೀತ್ ಅಭಿಮಾನಿ ವಲಯದಾಚೆಗೂ ಈ ಚಿತ್ರದ ಬಗ್ಗೆ ಜನ ಥ್ರಿಲ್ ಆಗಿದ್ದಾರೆ. ಅಷ್ಟರ ಮಟ್ಟಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಇಡೀ ತಂಡದ ಶ್ರಮ ಸಾರ್ಥಕವಾಗಿದೆ.
ಇನ್ನು ರಾಜಕುಮಾರ ಚಿತ್ರದ ಮೂಲಕ ಪುನೀತ್ ರಾಜ್ಕುಮಾರ್ ಮತ್ತೆ ಫಾರ್ಮಿಗೆ ಮರಳಿದ್ದಾರೆ. ಈ ಹಿಂದೆ ಒಂದಷ್ಟು ಚಿತ್ರಗಳು ನಿರೀಕ್ಷಿತ ಮಟ್ಟದ ಗೆಲುವು ಕಾಣದಿದ್ದಾಗ ಕೆಲ ಮಂದಿ ಇನ್ನು ದೊಡ್ಮನೆ ಹುಡುಗನ ಕಥೆ ಮುಗೀತು ಎಂಬರ್ಥದಲ್ಲಿ ಕುಹಕವಾಡಿದ್ದರು. ಪುನೀತ್ ಇನ್ನು ಫಾರ್ಮಿಗೆ ಮರಳೋದು ಕಷ್ಟ ಅಂತಲೂ ಮಾತಾಡಿಕೊಂಡಿದ್ದರು. ರಾಜಕುಮಾರ ಚಿತ್ರದ ಗಟ್ಟಿ ಕಥೆ ಮತ್ತು ಪುನೀತ್ ಅಭಿನಯವೆಲ್ಲ ಸೇರಿ ಎಲ್ಲ ಕುಹಕಗಳಿಗೂ ಮರ್ಮಾಘಾತ ನೀಡಿದಂತಾಗಿದೆ.
ರಾಜಕುಮಾರನ ಗೆಲುವು ಒಂದು ಗಟ್ಟಿ ಕಥೆಯ ಖದರಿಗೆ ಸ್ಪಷ್ಟ ಉದಾಹರಣೆ. ಕಥೆ ಚೆಂದಗಿದ್ದರೆ ಯಾವ ಬಿಲ್ಡಪ್ಪುಗಳೂ ಇಲ್ಲದೆ ಪ್ರೇಕ್ಷಕರನ್ನು ಆವರಿಸಿಕೊಳ್ಳಬಹುದು ಎಂಬುದಕ್ಕೂ ಈ ಚಿತ್ರ ತಾಜಾ ಉದಾಹರಣೆ. ಈ ಚಿತ್ರ ದಾಖಲಿಸುತ್ತಿರೋ ಗೆಲುವು ಕನ್ನಡ ಚಿತ್ರರಂಗದ ಹೆಮ್ಮೆಯೂ ಹೌದು. ಇಂಥಾ ವೆರೈಟಿಯ ಚಿತ್ರಗಳ ಸಂಖ್ಯೆ ಅಧಿಕವಾಗಲೆಂಬುದು ಹಾರೈಕೆ!

Courtesy: Cinebuzz

Facebook Auto Publish Powered By : XYZScripts.com