ನಿರಂಜನ್ ಕುಮಾರ್ ಶೆಟ್ಟಿಗೆ ಹುಟ್ಟು ಹಬ್ಬದ ಸಂಭ್ರಮ

ಸುದೀಪ್ ಅವರ ಸ್ಪರ್ಶ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡುವ ಮೂಲಕ ಬಣ್ಣ ಹಚ್ಚಿ ಚಿಂತ್ರರಂಗಕ್ಕೆ ಎಂಟ್ರಿ ಕೊಟ್ಟು, ಹಂತ ಹಂತವಾಗಿ ನಾಯಕ ನಟನಾಗಿ ನೆಲೆ ನಿಲ್ಲುತ್ತಿರೋ ನಿರಂಜನ್ ಶೆಟ್ಟಿ ಅವರೀಗ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಾಯಕ ನಟನಾಗಿ ಬೆಳೆದರೂ ನಿರ್ದೇಶನದ ಬಗ್ಗೆ ಭಾರೀ ಕನಸಿಟ್ಟುಕೊಂಡಿರುವ ಅವರು ಎಲ್ಲೆಡೆಯೂ ಯಶ ಕಾಣಲೆಂದು ಹಾರೈಸೋಣ.ಶಾಲಾ ದಿನಗಳಿಂದ ಗುಂಗು ಹತ್ತಿಸಿದ್ದ ಚಿತ್ರಕಲೆ, ಆ ನಂತರ ಕನಸಿನಂತೆ ಆವರಿಸಿಕೊಂಡಿದ್ದು ಚಿತ್ರ ನಿರ್ದೇಶಕನಾಗೋ ಹೆಬ್ಬಯಕೆ, ಇದರ ನಡು ನಡುವೆಯೇ ರಂಗಭೂಮಿಯ ಸೆಳೆತ. ಇದೆಲ್ಲದರಾಚೆಗೆ ಬದುಕೆಂಬುದು ಸೀದಾ ಕ್ಯಾಮೆರಾ ಮುಂದೆ ತಂದು ನಿಲ್ಲಿಸಿ ನಟನಾಗಿ ರೂಪಿಸಿತ್ತು!

ಇಂಥಾದ್ದೊಂದು ವೈಚಿತ್ರ್ಯದ ತಿರುವುಗಳ ಜೊತೆ ಜೊತೆಗೇ ಚಿತ್ರರಂಗದಲ್ಲಿ ನಾಯಕ ನಟರಾಗಿ ಕಾಲೂರಿ ನಿಲ್ಲುತ್ತಿರುವವರು ನಿರಂಜನ್ ಕುಮಾರ್ ಶೆಟ್ಟಿ.

ಎಂ.ಡಿ ಶ್ರೀಧರ್ ನಿರ್ದೇಶನದ ಜಾಲಿಡೇಸ್ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟು ಈಗ ಕೈತುಂಬಾ ಅವಕಾಶ, ಬೇರೇನೋ ಕನಸು ಹೊತ್ತು ನಿಂತಿರುವ ನಿರಂಜನ್ಗೆ ಇದೇ ಏಪ್ರಿಲ್ ೨೪ರಂದು ಹುಟ್ಟು ಹಬ್ಬದ ಸಂಭ್ರಮ. 

ಈಗ ನಾಯಕ ನಟನಾಗಿ ಬೇಡಿಕೆಯಲ್ಲಿರುವ ನಿರಂಜನ್ ಶೆಟ್ಟಿ ಮೂಲತಃ ಕುಂದಾಪುರದ ಬ್ರಹ್ಮಾವರದ ಪುಟ್ಟ ಗ್ರಾಮವೊಂದರವರು. ಇವರ ತಂದೆ ಭಾಸ್ಕರ ಶೆಟ್ಟಿ ಶಾಲಾ ಶಿಕ್ಷಕರು. ಆದ ಕಾರಣವೇ ಚಿತ್ರಕಲೆಯಲ್ಲಿನ ಮಗನ ಆಸಕ್ತಿಯನ್ನು ಪ್ರೋತ್ಸಾಹಿಸುತ್ತಾ ಬಂದಿದ್ದರು. ಇಂಥಾ ಭಾಸ್ಕರ ಶೆಟ್ಟರಿಗೆ ಕರಾವಳಿ ಸೀಮೆಯ ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವ ಜಯಪ್ರಕಾಶ ಹೆಗ್ಡೆ ಖಾಸಾ ಸ್ನೇಹಿತರು. ಆಗಾಗ ಮನೆಗೆ ಬರುತ್ತಿದ್ದ ಜಯಪ್ರಕಾಶ ಹೆಗ್ಡೆಯವರಿಗೆ ಅದೊಂದು ದಿನ ನಿರಂಜನ್ ಅವರದ್ದೇ ಫೋಟೋವೊಂದನ್ನು ಬಿಡಿಸಿ ಕೊಟ್ಟಿದ್ದರು.

ನಂತರ ಜಯಪ್ರಕಾಶ್ ಹೆಗ್ಡೆಯವರೇ ನಿರಂಜನ್ರನ್ನು ಬೆಂಗಳೂರಿನ ಚಿತ್ರಕಲಾ ಪರಿಷತ್ತಿಗೆ ಸೇರಿಸಿದ್ದರು. ಆ ನಂತರದಲ್ಲಿ ಮೆಲ್ಲಗೆ ಅಂತರ್ ಕಾಲೇಜು ಮಟ್ಟದಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿಯೂ ಕಾಣಿಸಿಕೊಳ್ಳಲಾರಂಭಿಸಿದ್ದ ನಿರಂಜನ್, ಸುರೇಶ್ ಆನಗಳ್ಳಿ, ಡಿ ಕೆ ಚೌಟ ಮುಂತಾದವರ ನಾಟಕಗಳಲ್ಲಿ ಅಭಿನಯಿಸುತ್ತಾ ಗಮನ ಸೆಳೆದಿದ್ದರು. ಈ ನಡುವೆಯೇ ಚಿತ್ರ ಕಲಾ ಪರಿಷತ್ತಿನಿಂದ ಪದವಿ ಮುಗಿಸಿಕೊಂಡು ಆಡ್ ಏಜೆನ್ಸಿ ಒಂದನ್ನು ಆರಂಭಿಸಿದ್ದ ನಿರಂಜನ್ ಆ ನಡುವೆಯೇ ಸೇರಿಕೊಂದ್ದು ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಬಳಿ.

 ನಿರ್ದೇಶನದ ಕನಸು ಕಟ್ಟಿಕೊಂಡೇ ವಿ. ಮನೋಹರ್ ಅವರ ಜೊತೆ ಕೆಲಸ ಮಾಡಲಾರಂಭಿಸಿದ್ದ ನಿರಂಜನ್ಗೆ ಅಲ್ಲಿಯೇ ಖ್ಯಾತ ಛಾಯಾಗ್ರಾಹಕರಾದ ಸುಂದರನಾಥ ಸುವರ್ಣರ ಪರಿಚಯವಾಗಿತ್ತು. ಇವರೇ ನಿರ್ದೆಶಕ ಎಂ ಡಿ ಶ್ರೀಧರ್ ಅವರಿಗೂ ಪರಿಚಯ ಮಾಡಿ ಕೊಟ್ಟಿದ್ದರು. ಆ ಹೊತ್ತಿಗಾಗಲೇ ಜಾಲಿಡೇಸ್ ಚಿತ್ರಕ್ಕೆ ಅಣಿಯಾಗುತ್ತಿದ್ದ ಶ್ರೀಧರ್ ನಿರಂಜನ್ ಅವರನ್ನೂ ಕೂಡಾ ಒಂದು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಈ ಚಿತ್ರದ ಬಳಿಕ ನಿರಂಜನ್ ಚಿತ್ರರಂಗದಲ್ಲಿ ನಿರ್ಣಾಯಕವಾಗಿ ಗುರುತಿಸಿಕೊಂಡಿದ್ದರು.

ಜಾಲಿಡೇಸ್ ಚಿತ್ರದ ನಂತರ ಮಹೇಶ್ ರಾವ್ ನಿರ್ದೇಶನದ ಕೇಸ್ ನಂ ೧೮\೬, ರಾಮ್ನಾರಾಯಣ್ ನಿರ್ದೇಶನದ ಪೈಪೋಟಿ, ಈಗ ಬಿಡುಗಡೆಗೆ ಸಿದ್ಧವಾಗಿರುವ ಗಿರೀಶ್ ಮೂಲಿಮನಿ ನಿರ್ದೇಶನದ ರಾಜರು ಚಿತ್ರದಲ್ಲಿ ನಟಿಸಿರುವ ನಿರಂಜನ್, ಧೀರೇಂದ್ರ ನಿರ್ದೇಶನದ ಜಗತ್ ಕಿಲಾಡಿ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಇದರ ಜೊತೆಗೇ ಕವಿತಾ ಲಂಕೇಶ್ ನಿರ್ದೇಶನದ ಒಂದು ಚಿತ್ರದ ಬಗೆಗೂ ಮಾತುಕಥೆಗಳು ನಡೆಯುತ್ತಿವೆಯಂತೆ.

ಹೀಗೆ ಹಂತ ಹಂತವಾಗಿ ನಾಯಕ ನಟನಾಗಿ ನೆಲೆ ನಿಲ್ಲುತ್ತಿರೋ ನಿರಂಜನ್ ಶೆಟ್ಟಿ ಅವರೀಗ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಾಯಕ ನಟನಾಗಿ ಬೆಳೆದರೂ ನಿರ್ದೇಶನದ ಬಗ್ಗೆ ಭಾರೀ ಕನಸಿಟ್ಟುಕೊಂಡಿರುವ ಅವರು ಎಲ್ಲೆಡೆಯೂ ಯಶ ಕಾಣಲೆಂದು ಹಾರೈಸೋಣ.

Courtesy:Cinebuzz

Facebook Auto Publish Powered By : XYZScripts.com