ನಾನು ಟಗರು ಚಿತ್ರ ನೋಡುವುದಕ್ಕೆ ಬಹಳ ಕಾತುರನಾಗಿದ್ದೀನಿ: ಶಿವರಾಜ್ ಕುಮಾರ್

“ಕಡ್ಡಿಪುಡಿ’ ಚಿತ್ರದ ಸಂತೋಷಕೂಟದಲ್ಲೇ ಶಿವರಾಜಕುಮಾರ್‌ ಒಂದು ಮಾತು ಹೇಳಿದ್ದರು. ಇನ್ನೊಮ್ಮೆ ನಿರ್ದೇಶಕ ಸೂರಿ ಜೊತೆಗೆ ಕೆಲಸ ಮಾಡಬೇಕೆಂದು. ಅವರಿಬ್ಬರನ್ನು ಮತ್ತೂಮ್ಮೆ ಯಾರು ಸೇರಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಅದು ಈಡೇರಿದೆ. ಸೂರಿ ನಿರ್ದೇಶನದಲ್ಲಿ ಶಿವರಾಜಕುಮಾರ್‌ ನಟಿಸಿರುವ “ಟಗರು’ ಚಿತ್ರವು ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

“ನಾನು ಮಾಡಿರುವ ಚಿತ್ರಗಳಲ್ಲೇ “ಕಡ್ಡಿಪುಡಿ’ ಒಂದು ಫೈನೆಸ್ಟ್‌ ಸಿನಿಮಾ. ಅದೊಂದು ಕಲ್ಟ್ ಚಿತ್ರ. ಟೆನ್ನಿಸ್‌ ಸ್ಟಾರ್‌ ಮಹೇಶ್‌ ಭೂಪತಿಯವರೂ ಸಹ ಚಿತ್ರ ನೋಡಿ ಅದ್ಭುತವಾಗಿದೆ ಎಂದು ಹೇಳಿದ್ದರು. ಅದಕ್ಕೂ ಮುನ್ನವೇ ಸೂರಿ ಜೊತೆಗೆ ಇನ್ನೊಂದು ಸಿನಿಮಾ ಮಾಡುವ ಬಗ್ಗೆ ಹೇಳಿದ್ದೆ. ಆಮೇಲೆ “ಟಗರು’ ಬಂತು. ಇದೊಂದು ವಿಭಿನ್ನ ಸಿನಿಮಾ. ಸೂರಿ ಬ್ರಾಂಡಿನ ಪೆಕ್ಯೂಲಿಯರ್‌ ಸಿನಿಮಾ.

“ಟಗರು – ಮೈಯೆಲ್ಲಾ ಪೊಗರು’ ಎಂಬ ಹೆಸರೇ ಹೇಳುವಂತೆ, ಇಲ್ಲಿ ಹೀರೋನ ಆ್ಯಟಿಟ್ಯೂಡ್‌ ಬಹಳ ವಿಭಿನ್ನ. ಅವನ ವರ್ತನೆ ವಿಭಿನ್ನ ಅಂದರೆ, 80 ಸೀನ್‌ಗಳಲ್ಲೂ ತಲೆ ಕೆಟ್ಟೋನ ತರಹ ಆಡ್ತಾನೆ ಅಂತಲ್ಲ. ಪರಿಸ್ಥಿತಿಗೆ ತಕ್ಕಂತೆ ಅವನ ಆ್ಯಟಿಟ್ಯೂಡ್‌ ತೋರಿಸುತ್ತಾನೆ. ಈ ತರಹ ಸಿನಿಮಾ ಬಂದಿಲ್ಲ ಅಂತಲ್ಲ. ಬಂದಿದ್ದರೂ ಜನ ಕನೆಕ್ಟ್ ಆಗುತ್ತಾರೆ’ ಎಂಬ ನಂಬಿಕೆ ಶಿವರಾಜಕುಮಾರ್‌ ಅವರಿಗಿದೆ.

ಕೆಲವು ಸಿನಿಮಾಗಳು ಮುಗಿದರೆ ಸಾಕು ಅಂತ ಅನ್ನಿಸೋದು ಉಂಟು. ಆದರೆ, ಈ ಚಿತ್ರ ಮಾತ್ರ ಇದುವರೆಗೂ ಸಾಕು ಎನಿಸಿಲ್ಲ. ನಿಜ ಹೇಳಬೇಕೆಂದರೆ, ಈ ಚಿತ್ರ ಹೇಗೆ ಬಂದಿದೆ ಅಂತ ನನಗೇ ತುಂಬಾ ಕುತೂಹಲವಿದೆ. ಹಾಗಾಗಿ ನಾನು ಚಿತ್ರ ನೋಡುವುದಕ್ಕೆ ಬಹಳ ಕಾತುರನಾಗಿದ್ದೀನಿ’ ಎನ್ನುತ್ತಾರೆ ಶಿವರಾಜಕುಮಾರ್‌.

Facebook Auto Publish Powered By : XYZScripts.com