ನನಗೆ ಬೇಸರವಾಗಿದ್ದು ನಿಜ: ಅರ್ಜುನ್ ಸರ್ಜಾ

“ಪ್ರೇಮ ಬರಹ’ ಚಿತ್ರಕ್ಕೆ ಬಂದ ವಿಮರ್ಶೆಗಳನ್ನೋದಿ ಅರ್ಜುನ್ ಸರ್ಜಾ ಅವರಿಗೆ ಬೇಸರವಾಗಿದೆಯಂತೆ ಎಂಬ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಅದು ನಿಜವೇ ಎಂಬ ಪ್ರಶ್ನೆ ಬರಬಹುದು. ಈ ಕುರಿತು ಅವರನ್ನು ಕೇಳಿದರೆ, ಬೇಸರ ಎನ್ನುವುದಕ್ಕಿಂತ ಚಿತ್ರದ ಗುಣಮಟ್ಟ ನೋಡಿ ಮಾರ್ಕ್ಸ್ ಕೊಟ್ಟಿದ್ದರೆ ಇನ್ನಷ್ಟು ಖುಷಿಯಾಗುತಿತ್ತು ಎಂದು ಸ್ವತಃ ಹೇಳಿಕೊಂಡಿದ್ದಾರೆ.

ಶನಿವಾರ ನಡೆದ “ಪ್ರೇಮ ಬರಹ’ ಚಿತ್ರದ ಸಂತೋಷ ಕೂಟದಲ್ಲಿ ಮಾತನಾಡಿದ ಅವರು, “ಚಿತ್ರ ನೋಡಿದವರು ಖುಷಿಪಟ್ಟಿದ್ದಾರೆ. ಆದರೆ, ಚಿತ್ರದ ವಿಮರ್ಶೆ ಬಂದಾಗ ಸ್ವಲ್ಪ ಬೇಸರ ಆಗಿದ್ದು ನಿಜ. ಬಹುಶಃ ಇಷ್ಟಕ್ಕೂ ನಾನು ಯಾವ ರೀತಿಯ ಚಿತ್ರ ಮಾಡಿದ್ದೇನೆ? ಇಲ್ಲಿ ಅಶ್ಲೀಲತೆ ಇಲ್ಲ. ಡಬ್ಬಲ್ ಮೀನಿಂಗ್ ಇಲ್ಲ. ಒಂದು ಪ್ರೇಮಕಥೆಯನ್ನು ದೇಶಭಕ್ತಿಯ ಹಿನ್ನೆಲೆಯಲ್ಲಿ ಹೇಳಿದ್ದೇನೆ. ಯೋಧರ ಕಷ್ಟ-ಸುಖ ತೋರಿಸಿದ್ದೇನೆ. ಭಾವನಾತ್ಮಕ ಸಂಬಂಧಗಳ ಬಗ್ಗೆ ಹೇಳಿದ್ದೇನೆ.

ಆದರೂ, ಯಾಕೆ ಇಷ್ಟು ಮಾರ್ಕ್ಸ್ ಅನ್ನೋದೇ ಗೊತ್ತಿಲ್ಲ. ಕಡಿಮೆ ಮಾರ್ಕ್ಸ್ ನೋಡಿ ಬೇಜಾಗಿದ್ದು ನಿಜ. ಆ ಸಮಯದಲ್ಲಿ ನಾನು ಓವರ್ ರಿಯಾಕ್ಟ್ ಮಾಡಿದೆ°àನೋ? ಇರಲಿ, ಆ ಬಗ್ಗೆ ಈಗ ಮಾತಾಡುವುದು ಸರಿಯಲ್ಲ. ಮುಂದೆ ಇನ್ನಷ್ಟು ಚಿತ್ರಗಳು ಬರಲಿವೆ. ಸದ್ಯಕ್ಕೆ ಕನ್ನಡದಲ್ಲಿ “ಕುರುಕ್ಷೇತ್ರ’ ರೆಡಿಯಾಗಿ ಬರುತ್ತದೆ. ಬೇರೆ ಭಾಷೆಯಲ್ಲೂ ಇಷ್ಟರಲ್ಲೇ ಸಿನಿಮಾಗಳು ಸೆಟ್ಟೇರಲಿವೆ’ ಎನ್ನುತ್ತಾರೆ ಅರ್ಜುನ್ ಸರ್ಜಾ.

Facebook Auto Publish Powered By : XYZScripts.com