ದರ್ಶನ್ ಕುರುಕ್ಷೇತ್ರಕ್ಕೆ ದ್ರೌಪದಿಯ ಆಯ್ಕೆ!

ಬೆಂಗಳೂರು: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ 50ನೇ ಚಿತ್ರ ಕುರುಕ್ಷೇತ್ರಕ್ಕಾಗಿ ನಾಯಕಿಯ ಹುಡುಕಾಟ ನಡೆಯುತ್ತಿದ್ದು, ನಾಯಕಿ ಸ್ಥಾನದ ರೇಸ್ ನಲ್ಲಿ ಐದು ನಟಿ ಮಣಿಯರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.ಇಡೀ ಮಹಾಭಾರತದಲ್ಲಿ ಖಳನಾಯಕನಾಗಿರುವ ದುರ್ಯೋಧನನ್ನು ಕೇಂದ್ರವಾಗಿಟ್ಟುಕೊಂಡು ಕುರುಕ್ಷೇತ್ರ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದ್ದು, ದ್ರೌಪದಿ ಪಾತ್ರಕ್ಕಾಗಿ ಹರಿಪ್ರಿಯ ಮತ್ತು ಪ್ರಣೀತಾ ಸುಭಾಷ್ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಇದಲ್ಲದೆ ಚಿತ್ರದ ಉಳಿದ ಪಾತ್ರಗಳಿಗಾಗಿ ರಚಿತಾ ರಾಮ್, ಕೃತಿ ಕರಬಂದ, ನಿಖಿತಾ ನಾರಾಯಣ್, ಲತಾ ಹೆಗ್ಡೆ ಹಾಗೂ ತೇಜಸ್ವಿನಿ ಪ್ರಕಾಶ್ ಅವರನ್ನೂ ಕೂಡ ಸಂಪರ್ಕಿಸಲು ಚಿತ್ರ ತಂಡ ಪ್ರಯತ್ನಿಸಿದೆ. ಇನ್ನು ಕುಂತಿ ಮತ್ತು ಗಾಂಧಾರಿ ಪಾತ್ರಗಳ ಕುರಿತು ಚಿತ್ರತಂಡ ಯಾವುದೇ ರೀತಿಯ ಮಾಹಿತಿ ಬಿಟ್ಟುಕೊಟ್ಟಿಲ್ಲ. ಚಿತ್ರ ಸೆಟ್ಟೇರುವ ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಮಾಹಿತಿ ನೀಡುವಂತೆ ಚಿತ್ರತಂಡಕ್ಕೆ ನಿರ್ದೇಶನ ನೀಡಲಾಗಿದೆಯಂತೆ.

ದರ್ಶನ್ ಅಭಿನಯದ 50ನೇ ಚಿತ್ರ ಎಂಬ ವಿಚಾರದಿಂದಲೇ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಕುರುಕ್ಷೇತ್ರ ಚಿತ್ರವನ್ನು ಖ್ಯಾತ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿದ್ದು, ನಿರ್ಮಾಪಕ ಮುನಿರತ್ನ ಭಾರಿ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಜೆಕೆ ಭರವಿ ಅವರು ಚಿತ್ರಕಥೆ ಬರೆದಿದ್ದು, ಕುರುಕ್ಷೇತ್ರ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ನಾದ ಬ್ರಹ್ಮ ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಇದೇ ಜುಲೈ 23 ರಂದು ಈ ಬಹು ನಿರೀಕ್ಷಿತ ಭಾರಿ ಬಜೆಟ್ ಚಿತ್ರ ಸೆಟ್ಟೇರಲಿದೆ.

Courtesy: Kannadaprabha

Facebook Auto Publish Powered By : XYZScripts.com