ಟಗರು ಚಿತ್ರದ ಬಗ್ಗೆ ನಾಯಕಿ ಮಾನ್ವಿತಾ ಹೇಳಿದ್ದೇನು?.. ಇಲ್ಲಿ ಓದಿ

ನಿರ್ದೇಶಕ ಸೂರಿಯವರ ಕೆಂಡ ಸಂಪಿಗೆ ಮೂಲಕ ಜನಪ್ರಿಯ ನಟಿಯಾದ ಮಾನ್ವಿತಾ ಹರೀಶ್ ಅವರ ನಟನೆಯ ಶಿವರಾಜ್ ಕುಮಾರ್ ಜೊತೆಗಿನ ಚಿತ್ರ ಟಗರು ಈ ವಾರ ಬಿಡುಗಡೆಯಾಗುತ್ತಿದೆ.

ಈ ಚಿತ್ರ ತಮ್ಮ ವೃತ್ತಿಬದುಕನ್ನು ಹೊಸ ದಿಕ್ಕಿಗೆ ಕೊಂಡೊಯ್ಯಬಹುದು ಎಂದು ಅಪಾರ ನಿರೀಕ್ಷೆಯಿಟ್ಟುಕೊಂಡಿರುವ ಮಾನ್ವಿತಾ ಹರೀಶ್, ಕೆಂಡ ಸಂಪಿಗೆ ನನ್ನನ್ನು ಬೆಳ್ಳಿತೆರೆಯಲ್ಲಿ ಗುರುತಿಸಿದಂತೆ ಈ ಚಿತ್ರ ಕೂಡ ಹೊಸ ಆಯಾಮವನ್ನು ತಂದುಕೊಡಲಿದೆ ಎಂದು ಭಾವಿಸುತ್ತೇನೆ. ಟಗರು ಚಿತ್ರವನ್ನು ನೆನೆಸಿಕೊಂಡಾಗ ಶಿವಣ್ಣ ಹೆಸರು ಕಣ್ಣಮುಂದೆ ಬರುತ್ತದೆ. ಆ ಪಾತ್ರಕ್ಕೆ ಬೇರೆ ಯಾರೂ ಕೂಡ ಹೊಂದಿಕೆಯಾಗಬಹುದು ಎಂದು ಅನಿಸುವುದಿಲ್ಲ ಎನ್ನುತ್ತಾರೆ ಮಾನ್ವಿತಾ.

ಈ ಚಿತ್ರ ಅವರಿಗೆ ಕಲಿಯಲು ಪ್ರಶಸ್ತ ವೇದಿಕೆಯಾಗಿತ್ತಂತೆ. ಸ್ಯಾಂಡಲ್ ವುಡ್ ನಲ್ಲಿ ವಿವಿಧ ಕಲಾವಿದರ ಜೊತೆ ಕೆಲಸ ಮಾಡಲು ಇಚ್ಛಿಸುತ್ತೇನೆ ಅದರಲ್ಲಿ ನನ್ನ ಒಂದು ಕನಸು ಈಡೇರಿದೆ ಇನ್ನಷ್ಟು ಈಡೇರಬೇಕಿದೆ ಎನ್ನುತ್ತಾರೆ.

ಚಿತ್ರದಲ್ಲಿ ನಾನು ಸಹಜವಾಗಿಯೇ ಅಭಿನಯಸಿದ್ದೇನೆ. ನಾನು ಮತ್ತು ಶಿವಣ್ಣ ನಡುವೆ ಅಷ್ಟೊಂದು ವಯಸ್ಸಿನ ಅಂತರವಿದ್ದರೂ ತೆರೆ ಮೇಲೆ ನಮ್ಮಿಬ್ಬರ ಜೋಡಿ ಚೆನ್ನಾಗಿ ಕಾಣಿಸಿಕೊಳ್ಳಲು ತೆರೆ ಹಿಂದೆ ಕೂಡ ಅವರ ಜೊತೆ ಅಷ್ಟೇ ಉತ್ತಮ ಬಾಂಧವ್ಯವಿರಿಸಿಕೊಂಡಿದ್ದೆ. ಚಿತ್ರದಲ್ಲಿ ಡಾನ್ ಎಂದು ಕರೆಯವ ನಾನು ಅವರನ್ನು ಸೆಟ್ ನಲ್ಲಿ ಕೂಡ ಹಾಗೆಯೇ ಕರೆಯುತ್ತಿದ್ದೆ. ದೃಶ್ಯಗಳಲ್ಲಿನ ಅಭಿನಯ ಮುಗಿದ ಮೇಲೆ ಒಬ್ಬರನ್ನೊಬ್ಬರು ಪ್ರಶಂಸಿಸಿಕೊಳ್ಳುತ್ತಿದ್ದೆವು. ನಾವಿಬ್ಬರು ಅಂತರ ಕಾಯ್ದುಕೊಳ್ಳುತ್ತಿದ್ದರೆ ಮತ್ತು ನಾನು ಅವರಲ್ಲಿ ಭಯವಿಟ್ಟುಕೊಂಡಿದ್ದರೆ ಅಭಿನಯಿಸಲು ನನಗೆ ಅಷ್ಟೊಂದು ಸುಲಭವಾಗುತ್ತಿರಲಿಲ್ಲ ಎಂಬುದು ಮಾನ್ವಿತಾ ಅಭಿಪ್ರಾಯ.

Facebook Auto Publish Powered By : XYZScripts.com