ಜನ ಗಣ ಮನ ಚಿತ್ರ ವಿಮರ್ಶೆ: ಮತ್ತೊಂದು ರಿಸೈಕಲ್ ಚಿತ್ರ

“ನನ್ನ ಮಗಳ ಮೇಲೆ ಆಣೆ ಮಾಡಿ ಹೇಳ್ತೀನಿ. ಆ ದುರ್ಗ ಮತ್ತೆ ಯಾವುದೋ ಒಂದು ರೂಪದಲ್ಲಿ ಬಂದೇ ಬರ್ತಾಳೆ. ನಿನ್ನ ಪ್ರಾಣ ತೆಗೀತಾಳೆ. ಇದು ನನ್ನ ಶಾಪ …’ ಎಂದು ಅರ್ಚಕರು ಶಾಪ ಹಾಕಿ ಅದೆಷ್ಟೋ ದಿನಗಳ ನಂತರ … ದೂರದ ಬೆಂಗಳೂರಿನಲ್ಲಿ, ಡಿಜಿಪಿಯೊಬ್ಬರು ತಮ್ಮ ಅಧಿಕಾರಿಗಳಿಗೆ ಒಂದು ಮಿಸ್ಸಿಂಗ ಕೇಸು ಒಪ್ಪಿಸುತ್ತಾರೆ. ಆದರೆ, ಎಲ್ಲರೂ ಒಂದಲ್ಲ ಒಂದು ನೆಪ ಹೇಳಿಕೊಂಡು ಆ ಕೇಸ್ನಿಂದ ತಪ್ಪಿಸಿಕೊಳ್ಳುತ್ತಾರೆ.

“ನಮ್ಮ ಡಿಪಾರ್ಟ್ಮೆಂಟ್ನಲ್ಲಿ ಈ ಕೇಸ್ ಬಗೆಹರಿಸೋ ಗಂಡು ಆಫಿಸರ್ರೆ ಇಲ್ವಾ?’ ಎಂದು ಬೇಸರದಿಂದ ಕೇಳಿದಾಗ, “ಗಂಡು ಇಲ್ಲ ಹೆಣ್ಣು ಇದ್ದಾಳೆ …’ ಎಂಬ ಉತ್ತರ ಬರುತ್ತದೆ. ಕಟ್ ಮಾಡಿದರೆ, ಇನ್ಸ್ಪೆಕ್ಟರ್ ಝಾನ್ಸಿ ಎಂಬ ಖಡಕ್ ಪೊಲೀಸ್ ಆಧಿಕಾರಿಯು ಡಿಜಿಪಿ ಆಫೀಸಿಗೆ ಎಂಟ್ರಿ ಕೊಡುತ್ತಾಳೆ. ಆ ಹೆಣ್ಣು, ಅದೇ ದುರ್ಗೆಯ ಇನ್ನೊಂದು ರೂಪ ಅಂತ ತಿಳಿದುಕೊಂಡುಬಿಡಿ ಮತ್ತು ಆ ದುರ್ಗೆಯು ಪೊಲೀಸ್ ಯೂನಿಫಾರ್ಮ್ನಲ್ಲಿ ದುಷ್ಟರನ್ನು ಮಟ್ಟಹಾಕಲು ಬಂದಿದ್ದಾಳೆ ಎನ್ನುವಲ್ಲಿಗೆ “ಜನ ಗಣ ಮನ’ ಶುರುವಾಗುತ್ತದೆ.

ಒಬ್ಬ ದೊಡ್ಡ ಸಮಾಜ ಸೇವಕ ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾನೆ ಮತ್ತು ಅವನ ಕಣ್ಮರೆಯ ಹಿಂದೆ ಅದೇ ನೀಲಕಂಠನ ಕೈವಾಡವಿರುತ್ತದೆ. ಇಷ್ಟು ಹೇಳಿದ ಮೇಲೆ, ಏನೆಲ್ಲಾ ಆಗಬಹುದು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. “ಜನ ಗಣ ಮನ’ ಚಿತ್ರದಲ್ಲಿ ವಿಶೇಷವಾದ ಕಥೆಯಾಗಲೀ, ಸರ್ಪ್ರೈಸ್ ಆಗಲೀ ಇಲ್ಲ.

ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿಯ ದಿನಚರಿ ಇದೆ. ಈಗಾಗಲೇ ಈ ತರಹದ ಪಾತ್ರಗಳಲ್ಲಿ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಅದೇ ಆಯೇಷಾ “ಚೆನ್ನಮ್ಮ ಐಪಿಎಸ್’ ಮುಂತಾದ ಚಿತ್ರಗಳಲ್ಲಿ ಖಡಕ್ ಪೊಲೀಸ್ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೂ ಇದು ಹೊಸದಲ್ಲ, ಹಾಗೆಯೇ ಆಯೇಷಾಗೂ ಕೂಡಾ. ಆದರೂ ಅವರು ಶ್ರದ್ಧೆಯಿಂದ ಬಹಳ ಕಷ್ಟಪಟ್ಟು ಹೊಡೆದಾಡಿದ್ದಾರೆ.

ಇನ್ನು ಅಭಿನಯದಲ್ಲಿ ಹೆಚ್ಚು ಹೇಳುವುದಕ್ಕೇನಿಲ್ಲ. ಇನ್ನು ಅವರ ತುಟಿ ಚಲನೆಗೂ, ಸಂಭಾಷಣೆಗೂ, ಆಕಾರಕ್ಕೂ ಮತ್ತು ಧ್ವನಿಗೂ ಸಂಬಂಧವೇ ಇಲ್ಲ ಎನ್ನುವಂತಿದೆ. ಆಯೇಷಾ ಬಿಟ್ಟರೆ ಇರುವ ಎರಡು ದೊಡ್ಡ ಮತ್ತು ಗಮನಾರ್ಹ ಪಾತ್ರಗಳೆಂದರೆ ಅದು ರವಿ ಕಾಳೆ ಮತ್ತು ರಾಮಕೃಷ್ಣ ಅವರದ್ದು. ಇಬ್ಬರೂ ಪಾತ್ರಕ್ಕೆ ಅನುಗುಣವಾಗಿ ನಟಿಸಿದ್ದಾರೆ. ಇನ್ನು ಚಿತ್ರದ ಬಗ್ಗೆ ವಿಶೇಷವಾಗಿ ಹೇಳುವುದೇನಿಲ್ಲ.

Facebook Auto Publish Powered By : XYZScripts.com