ಗೂಗಲ್ ಚಿತ್ರ ವಿಮರ್ಶೆ

ಗೀತಸಾಹಿತಿ ವಿ. ನಾಗೇಂದ್ರಪ್ರಸಾದ್ ನಟಿಸಿ ನಿರ್ದೇಶನ ಮಾಡಿರುವ ಗೂಗಲ್ ಚಿತ್ರ ತೆರೆ ಕಂಡಿದೆ. ತನ್ನ ಟೈಟಲ್ ಮೂಲಕವೇ ಗಮನ ಸೆಳೆದು, ನಾನಾ ವಿಧದಲ್ಲಿ ಕುತೂಹಲ ಕೆರಳಿಸಿದ್ದ ಈ ಚಿತ್ರ ನೋಡಿ ಹೊರ ಬಂದ ಪ್ರೇಕ್ಷಕರೆದೆಯಲ್ಲಿ ಎಂಥಾದ್ದೋ ಅವ್ಯಕ್ತ ಕಂಪನ, ಮಾಮೂಲು ಜಾಡಿನಾಚೆಗಿನ ಒಂದೊಳ್ಳೆ ಚಿತ್ರ ನೋಡಿದ ಖುಷಿ ಸ್ಪಷ್ಟವಾಗಿಯೇ ಮಿರುಗುತ್ತಿದೆ!

ಈ ಚಿತ್ರದ ಹಾಡು ಮತ್ತು ಟ್ರೈಲರ್ಗಳೇ ಇದೊಂದು ಭಿನ್ನ ಬಗೆಯ ಕಥಾ ಹಂದರ ಹೊಂದಿರುವ ಚಿತ್ರ ಎಂಬ ಭರವಸೆ ಹುಟ್ಟಿಕೊಂಡಿತ್ತು. ಆ ಬಳಿಕ ಈ ಚಿತ್ರದ ಕಥೆ ಏನೆಂಬುದನ್ನು ಕೆದಕುವಂಥಾ ಪ್ರಯತ್ನಗಳೂ ಅವ್ಯಾಹತವಾಗಿಯೇ ನಡೆದಿದ್ದವು. ಗೂಗಲ್ ಚಿತ್ರವನ್ನು ಪ್ರತಿಯೊಬ್ಬರ ಭಾವಕೋಶಗಳಲ್ಲಿ ಅವಿತಿರೋ ನಾನಾ ಭಾವಗಳನ್ನು ಮೀಟುವಂತೆ ಕಟ್ಟಿ ಕೊಡುವುದರಲ್ಲಿ ಈ ಮೂಲಕ ಕವಿರತ್ನ ವಿ. ನಾಗೇಂದ್ರಪ್ರಸಾದ್ ಗೆದ್ದಿದ್ದಾರೆ. ಅದು ಸ್ವರ್ಗಕ್ಕೇ ಕಿಚ್ಚುಹಚ್ಚುವಂಥಾ ಸುಂದರ ಸಂಸಾರ. ಪ್ರೀತಿಸಿ ಮದುವೆಯಾಗಿ ಹೆಗಲಾಗಿ ಬದುಕುವ ಗಂಡ ಹೆಂಡತಿ, ಅವರಿಗೊಬ್ಬಳು ಮುದ್ದುಮುದ್ದಾದ ಮಗಳು. ಭವಿಷ್ಯದ ಬಗ್ಗೆ ರಂಗು ರಂಗಿನ ಕನಸು ಹೆಣೆಯುತ್ತಾ ಬದುಕೋ ಈ ಸಂಸಾರದಲ್ಲಿಯೂ ಹಠಾತ್ತನೆ ಒಂದು ಬಿರುಗಾಳಿ ಎದ್ದು ಬಿಡುತ್ತೆ. ಎಲ್ಲ ರೋಮಾಂಚಕ ವಾತಾವರಣವೂ ಅಲ್ಲೋಲ ಕಲ್ಲೋಲವಾಗಿ, ನಂಬಿಕೆಯ ಬುಡವೂ ಅದುರುವಂಥಾ ಸನ್ನಿವೇಶ ಎದುರಾಗುತ್ತದೆ. ಅದು ಬಹುಶಃ ಯಾರೂ ಸುಲಭವಾಗಿ ಊಹಿಸಲಾಗದ ತಿರುವು. ಅದುವೇ ಇಡೀ ಚಿತ್ರದ ಅಂತಃಸತ್ವ. ಅದರ ಸುತ್ತಲೇ ಗೂಗಲ್ ಚಿತ್ರದ ಕಥೆ ವೇಗ ಪಡೆದುಕೊಳ್ಳುತ್ತದೆ.

ಅದು ಸ್ವರ್ಗಕ್ಕೇ ಕಿಚ್ಚುಹಚ್ಚುವಂಥಾ ಸುಂದರ ಸಂಸಾರ. ಪ್ರೀತಿಸಿ ಮದುವೆಯಾಗಿ ಹೆಗಲಾಗಿ ಬದುಕುವ ಗಂಡ ಹೆಂಡತಿ, ಅವರಿಗೊಬ್ಬಳು ಮುದ್ದುಮುದ್ದಾದ ಮಗಳು. ಭವಿಷ್ಯದ ಬಗ್ಗೆ ರಂಗು ರಂಗಿನ ಕನಸು ಹೆಣೆಯುತ್ತಾ ಬದುಕೋ ಈ ಸಂಸಾರದಲ್ಲಿಯೂ ಹಠಾತ್ತನೆ ಒಂದು ಬಿರುಗಾಳಿ ಎದ್ದು ಬಿಡುತ್ತೆ. ಎಲ್ಲ ರೋಮಾಂಚಕ ವಾತಾವರಣವೂ ಅಲ್ಲೋಲ ಕಲ್ಲೋಲವಾಗಿ, ನಂಬಿಕೆಯ ಬುಡವೂ ಅದುರುವಂಥಾ ಸನ್ನಿವೇಶ ಎದುರಾಗುತ್ತದೆ. ಅದು ಬಹುಶಃ ಯಾರೂ ಸುಲಭವಾಗಿ ಊಹಿಸಲಾಗದ ತಿರುವು. ಅದುವೇ ಇಡೀ ಚಿತ್ರದ ಅಂತಃಸತ್ವ. ಅದರ ಸುತ್ತಲೇ ಗೂಗಲ್ ಚಿತ್ರದ ಕಥೆ ವೇಗ ಪಡೆದುಕೊಳ್ಳುತ್ತದೆ.

ಹೀಗೆ ಒಂದು ಬಿಂದುವಿನಿಂದ ಹರಡಿಕೊಳ್ಳುವ ಕಥೆಯನ್ನು ಒಂಚೂರೂ ಬೋರು ಹೊಡೆಸದಂತೆ, ಆಗಾಗ ಕಣ್ಣೀರಾಗಿಸುತ್ತಾ, ಮುಂದೇನಾಗುತ್ತದೆ ಎಂಬ ಕುತೂಹಲ ಉಳಿಯುವಂತೆ ಕಟ್ಟಿ ಕೊಡುವಲ್ಲಿ ನಿರ್ದೇಶಕರಾಗಿ ನಾಗೇಂದ್ರ ಪ್ರಸಾದ್ ಅವರ ಕಸುಬುದಾರಿಕೆ ಎದ್ದು ಕಾಣುತ್ತದೆ. ಇನ್ನುಳಿದಂತೆ ಶುಭಾ ಪೂಂಜಾ ಅವರದ್ದು ಚೆಂದದ ನಟನೆ. ಯಾವುದೇ ಮಡಿವಂತಿಕೆ ಇಲ್ಲದೆ ಸವಾಲಿನ ಪಾತ್ರವೊಂದನ್ನು ಶುಭಾ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ತನ್ನ ನಟನೆಯ ಮೂಲಕವೇ ಪ್ರೇಕ್ಷಕರಲ್ಲಿ ನಾನಾ ಭಾವಗಳನ್ನು ಹುಟ್ಟು ಹಾಕುವ ಶುಭಾ ಪೂಂಜಾ ವೃತ್ತಿ ಜೀವನದಲ್ಲಿಯೇ ಖಂಡಿತವಾಗಿಯೂ ಗೂಗಲ್ ಒಂದು ಬಹುಮುಖ್ಯ ಸಿನಿಮಾವಾಗಿ ದಾಖಲಾಗುತ್ತದೆ.

ಈ ಹಿಂದೆ ಗೂಗಲ್ ಚಿತ್ರ ಕುತೂಹಲ ಹುಟ್ಟಿಸಿದ್ದರ ಹಿನ್ನೆಲೆಯಲ್ಲಿ ಎಂಥಾ ನಿರೀಕ್ಷೆಯಿಟ್ಟುಕೊಂಡು ಹೋದರೂ ಖಂಡಿತಾ ಮೋಸವಾಗೋದಿಲ್ಲ. ಇನ್ನು ನಾಗೇಂದ್ರ ಪ್ರಸಾದ್ ನಟನಾಗಿಯೂ ಗಮನ ಸೆಳೆಯುತ್ತಾರೆ. ಶುಭಾಗೇ ಪೈಪೋಟಿ ಕೊಡುವಂತೆ ನಟಿಸಿರುವ ನಾಗೇಂದ್ರ ಪ್ರಸಾದ್ ಅವರ ಅಭಿನಯದಲ್ಲಿನ ತಲ್ಲೀನತೆ, ಸಹಜ ಸ್ಥಿತಿಗಳು ಗಮನ ಸೆಳೆಯುತ್ತವೆ. ಇಡೀ ಸಿನಿಮಾದಲ್ಲಿ ನಗಿಸುವುದು ಶೋಭರಾಜ್. ಪೋಷಕ ನಟ ಮುನಿ ಅವರು ಇಲ್ಲಿ ತಮ್ಮ ಯಥಾಪ್ರಕಾರದ ವಿಲನ್ ಪಾತ್ರಕ್ಕೆ ಅಲ್ಪವಿರಾಮ ಹಾಕಿ ಎಲ್ಲರಿಗೂ ಇಷ್ಟವಾಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಂಗಭೂಮಿ ಹಿನ್ನೆಲೆಯಿಂದ ಬಂದ ಸಂಪತ್ತು ಮತ್ತು ಜಯದೇವ್ ಇಬ್ಬರೂ ಪಾತ್ರಗಳೇ ತಾವಾಗಿದ್ದಾರೆ. ಅಮೃತಾ ರಾವ್ ಈ ಹಿಂದಿನ ಎಲ್ಲ ಚಿತ್ರಗಳಿಗಿಂತಾ ಇಲ್ಲಿ ಹೆಚ್ಚು ಮುದ್ದಾಗಿ ಕಾಣುತ್ತಾಳೆ.

ಬಹುಶಃ ಈ ಚಿತ್ರದ ಬಗ್ಗೆ ಇದಕ್ಕಿಂತಲೂ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಆ ಅನುಭೂತಿಯನ್ನು ಥೇಟರಿನಲ್ಲಿ ಕೂತು ಅನುಭವಿಸಿದರೇನೇ ಚೆನ್ನ!

Facebook Auto Publish Powered By : XYZScripts.com