ದನ ಕಾಯೋನು ಚಿತ್ರ ವಿಮರ್ಶೆ

ಗುಡ್ಡಗಾಡಿನ ನಂದಿಗುಡ್ಡದಲ್ಲಿ ಮಾತಿನ ಸುಡುಗಾಡು ಮತ್ತು ಅಲ್ಲೊಂದು ಪ್ರೀತಿಯ ಹೂವು

ಯೋಗರಾಜ್ ಭಟ್ ನಿರ್ದೇಶನದ ‘ದನ ಕಾಯೋನು’ ಹಲವಾರು ಕಾರಣಗಳಿಗೆ ಭರಪೂರ ನಿರೀಕ್ಷೆಗಳನ್ನು ಮೂಡಿಸಿದ್ದ ಸಿನೆಮಾ. ಮಂಡ್ಯದ ಗ್ರಾಮವೊಂದರ ಜೀವನವೇ ಕಥೆಯಾಗಿ ಅಭೂತಪೂರ್ವ ಯಶಸ್ಸು ಕಂಡ ರಾಮ್ ರೆಡ್ಡಿ ನಿರ್ದೇಶನದ ‘ತಿಥಿ’, ಕನ್ನಡದ ಹೆಮ್ಮೆಯ ಸಾಹಿತಿ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ತೆರೆಗೆ ಬಂದು ಯಶಸ್ಸು ಕಂಡಿದ್ದು- ಈ ಹಿನ್ನಲೆಯಲ್ಲಿ ಗ್ರಾಮೀಣ ಪರಿಸರದಲ್ಲಿ ಮೂಡಿರಬಹುದಾದ ಅತ್ಯುತ್ತಮ ಕಥೆಯೊಂದು ನಮಗೆ ದಕ್ಕಬಹುದೇನೋ ಎಂಬ ನಿರೀಕ್ಷೆಯ ಜೊತೆಗೆ ಆಧುನಿಕ ತಲ್ಲಣಗಳನ್ನು ಕೂಡ ನಿರ್ದೇಶಕ ಹಿಡಿದಿಡಿಟ್ಟಿರಬಹುದೇನೋ ಎಂಬ ಪ್ರಬುದ್ಧ ಪ್ರೇಕ್ಷಕನ ಒತ್ತಾಸೆಯೂ ಸೇರಿತ್ತು. ‘ದನ ಕಾಯೋನು’ ಈ ನಿರೀಕ್ಷೆಗಳನ್ನು ಕಾಯ್ದಿದೆಯೇ?
ನಂದಿಗುಡ್ಡವೆಂಬ ಗುಡ್ಡಗಾಡಿನಿಂದ ಸುತ್ತುವರೆದ ಗ್ರಾಮ. ಅಲ್ಲಿ ಆ ಊರಿನವರ ದನಗಳನ್ನು ಮೇಯಿಸುವ ಕೂಡಿಕೆ ಕೃಷ್ಣಪ್ಪ (ಬಿರಾದಾರ್) ಮತ್ತು ಅವನು ಸಾಕಿದ ಮಗ ಕೆಂಪರಾಜು ಅಲಿಯಾಸ್ ಡಾಕ್ಟರ್ ಡೊಕೊಮೊ (ವಿಜಯ್). ಅವರ ಜೊತೆಗೆ ಕೂಡಿಕೆಗಾಗಿ ಸಾಕಿರುವ ಹೋರಿ ಶಂಕರ. ಇವರ ಜೊತೆಗೆ ಸಬ್ಸಿಸ್ಡಿ (ರಂಗಾಯಣ ರಘು). ಭೂಮಿಯಿಲ್ಲದ ಜನ, ದೊಡ್ಡ ಡೈರಿ ಕಟ್ಟುವಾಸೆ ಇವರಿಗೆ. ಈ ಹೋರಿಯನ್ನು ಆಧಾರವಾಗಿಟ್ಟುಕೊಂಡು ಸಾಲ ಕೇಳುವ ಇವರನ್ನು ‘ನಿನ್ನ ಹೋರಿಗೆ ಕಿಮ್ಮತ್ತು ಪೈಸೆ ಹುಟ್ಟುವ ದಿನ ಬಾ’ ಎಂದು ಜರಿದು ಓಡಿಸುವ ಬ್ಯಾಂಕ್ ಮ್ಯಾನೇಜರ್.
ನಿರ್ದೇಶಕರ ಉದಾತ್ತ ಆಶಯ ಪ್ರಾರಂಭದಲ್ಲಿಯೇ ಗೋಚರವಾದರೂ, ಅದನ್ನು ನಿರ್ವಹಿಸಿರುವ ರೀತಿಯಲ್ಲಿ, ತೀವ್ರ ಲೌಡ್ ಎನ್ನಿಸುವ ಮತ್ತು ಆರ್ಭಟಿಸುವ ಮಾತುಗಳ ಸಂಭಾಷಣೆಯ-ಸನ್ನಿವೇಶಗಳ ಔಚಿತ್ಯವೇ ಪ್ರೇಕ್ಷಕನಿಗೆ ತಿಳಿಯುವುದಿಲ್ಲ. ಊರಿನ ದನಕರುಗಳ ಅಧ್ಯಯನ ಮಾಡಲು ಕನ್ನಡ ಬಾರದ ವಿದೇಶಿ ಯುವತಿಯರು ಹಳ್ಳಿಗೆ ಆಗಮಿಸಿದಾಗ ಅವರ ಜೊತೆಗೆ ಸಬ್ಸಿಡಿ ಮತ್ತು ಡೊಕೊಮೊ ಅತಿರೇಕದಲ್ಲಿ ವ್ಯವಹರಿಸುವ ರೀತಿ, ಸಾಲ ಕೇಳುವಾಗ ಏರು ಧ್ವನಿಯಲ್ಲಿ ಎಲ್ಲರೂ ಕಿರುಚಾಡಿ-ಪರಚಾಡಿ ಅಸಂಬದ್ಧ ಮಾತುಗಳನ್ನು ಲೆಕ್ಕವಿಲ್ಲದಷ್ಟು ಖರ್ಚು ಮಾಡುವುದು, ಹೀಗೆ ಒಂದು ವಿಚಿತ್ರವಾದ-ಅತಿರೇಕದ ಪರಿಸರವನ್ನು ನಿರ್ದೇಶಕ ಪ್ರೇಕ್ಷಕರ ಮುಂದಿಟ್ಟು, ಏನು ತೋಚದಂತೆ ಗೊಂದಲ ಮೂಡಿಸುತ್ತಾರೆ.
ಸಂತ್ರಸ್ತರು ಮತ್ತು ಆದಶ್ರಪ್ರಾಯ ನಾಯಕನ ಎದುರು ಒಬ್ಬ ಕೆಡುಕಿನ ಖಳನಾಯಕ ಬೇಕಲ್ಲವೇ! ಗ್ರಾಮದ ಛೇರ್ಮನ್ (ಸುಚೇಂದ್ರ ಪ್ರಸಾದ್) ಮತ್ತು ಅವನ ಪತ್ನಿ, ದನ ಕಾಯುವವರನ್ನು ಊರಿನಿಂದ ಹೊರಗೆ ಹಾಕಲು ಹವಣಿಸುತ್ತಿರುತ್ತಾರೆ. ಕಾರಣ ಹಿಂದಿನ ಸಂಕ್ರಾಂತಿಯಲ್ಲಿ ಹೋರಿ ಶಂಕರ, ಛೇರ್ಮನ್ ತಂದೆಗೆ ಆಕಸ್ಮಿಕವಾಗಿ ಗುಮ್ಮಿದ್ದರಿಂದ ಅವರು ಮೃತರಾಗಿರುತ್ತಾರೆ. ಛೇರ್ಮನ್ ನ ದೂರದ ಸಂಬಂಧಿ ಜುಮ್ಮಿ, ಸ್ವತಂತ್ರ ಹೆಣ್ಣುಮಗಳು. ಪೊಲೀಸ್ ಆಗುವ ಕನಸು ಹೊತ್ತವಳು. ಅವಳ ಮೇಲೆ ಡೊಕೊಮಾಗೆ ಪ್ರೀತಿ. ಇನ್ನು ಡೊಕೋಮನ ಹೋರಿ ಶಂಕರನಿಗೂ, ಮತ್ತು ಜುಮ್ಮಿಯ ಹಸು ಗಂಗೆಗೂ ಪ್ರೀತಿ.
ಹೀಗೆ ಹತ್ತು ಹಲವಾರು ಅರಚುವ ಮಾತಿನ ಅಸಂಬದ್ಧ ಘಟನೆಗಳ ಮೂಲಕ ಸಿನೆಮಾ ಮುಂದುವರೆಯುತ್ತದೆ. ಛೇರ್ಮನ್ ಮೇಲೆ ದಾನ ಕಾಯುವ ಮಂದಿ ಮನ ಬಂದಂತೆ ಕಿರುಚಿದರೆ, ಅತ್ತ ಛೇರ್ಮನ್ ಬಂಧೂಕು ತೋರಿಸಿ ಇನ್ನೂ ಹೆಚ್ಚಿನ ಏರು ಧ್ವನಿಯಲ್ಲಿ ಅರಚುತ್ತಾನೆ. “ಹತ್ತು ಊರಿನಲ್ಲಿ ಯಾವ ಸೈಡ್ ನಿಂದ ನೋಡಿದರು ಹುಡುಗಿ ತರಹ ಕಾಣುವುದು ನೀನೊಬ್ಬಳೇ” ಎಂದು ಇನ್ನು ಹತ್ತು ಹಲವು ರೀತಿಯಲ್ಲಿ ಅರುಚಿ ಡೊಕೊಮೊ ಪ್ರೇಮ ನಿವೇದನೆ ಮಾಡಿಕೊಂಡರೂ, ‘ನಿನ್ನ ಕಾಲ ಮೇಲೆ ನಿಂತು 10 ರೂಪಾಯಿ ಸಂಪಾದನೆ’ ಮಾಡಿ ಆಗ ಬಂದು ತಾಳಿ ಕಟ್ಟು ಎಂದು ಹಿಂದಿರುಗಿ ಆರ್ಭಟಿಸುತ್ತಾಳೆ ಜುಮ್ಮಿ.
ಅತಿರೇಕದ ವಾಕ್ಸಮರಗಳ ನಡುವೆ, ದ್ವಿತೀಯಾರ್ಧದಲ್ಲಿ ಸಂಘರ್ಷವೊಂದು ಮೂಡುತ್ತದೆ. ಹೋರಿ ಶಂಕರನಿಗೆ ಕೋಟಿಗಟ್ಟಲೆ ಹಣ ನೀಡಿ ಕೊಳ್ಳಲು ವಿದೇಶಿ ಮಹಿಳೆ ಊರಿಗೆ ಹಿಂದಿರುಗುತ್ತಾರೆ. ಈಗ ಡೊಕೊಮೊ ಮತ್ತು ಕೃಷ್ಣಪ್ಪನ ಸುತ್ತ ಇರುವ ಜನರ ಮನಸ್ಸುಗಳು ಹೇಗೆಲ್ಲಾ ಬದಲಾಗುತ್ತವೆ?
ಜಾಗತೀಕರಣದ ಬಿಸಿಯಲ್ಲಿ, ಬಹುರಾಷ್ಟ್ರೀಯ ಲಾಭಕೋರ ಸಂಸ್ಥೆಗಳು ದೇಶೀ ತಳಿಯ ಜಾನುವಾರು, ಸಸ್ಯ, ಧಾನ್ಯಗಳ ಮೇಲೆ ಪ್ರಹಾರ ಮಾಡಿ, ದೂರದೃಷ್ಟಿಯಿಲ್ಲದ-ವಿವೇಕವಿಲ್ಲದ ಜನರ ಅಲ್ಪತನದ ಆಸೆಯಿಂದ, ದೇಶೀ ತಳಿಗಳು, ಜೊತೆಗೆ ಮಾನವ ಸಂಬಂಧಗಳ ಪ್ರೀತಿ ಮತ್ತು ನಂಬಿಕೆ ಕೂಡ ನಶಿಸುತ್ತಿರುವ ಸಾಮಾಜಿಕ ಸಂದರ್ಭದ ಹಿನ್ನಲೆಯಲ್ಲಿ, ಸಿನೆಮಾದಲ್ಲಿ ಮೂಡಿರುವ ಈ ಸಂಘರ್ಷ ಮತ್ತು ಕಾಣುವ ಅಂತ್ಯ ಅರ್ಥಗರ್ಭಿತವಾಗಿ ಕಂಡರೂ, ಪಾತ್ರಗಳ ಸಂಭಾಷಣೆಯ ಆರ್ಭಟ, ಅತಿರೇಕದ ನಟನೆಯ ನಡುವೆ ಅದು ಸವಕಲಾಗಿಬಿಡುತ್ತದೆ. ಅತಿ ಆದರ್ಶಪ್ರಾಯ ಹಿರೋಯಿಕ್ ಪಾತ್ರವೊಂದನ್ನು ಒಂದು ಕಡೆ ಸೃಷ್ಟಿಸಿ ಅದಕ್ಕೆ ಪ್ರತಿಯಾಗಿ ಅಷ್ಟೇ ತೀವ್ರವಾದ ಕೆಡುಕನ್ನು ಸೃಷ್ಟಿಸುವ ಮಾಮೂಲಿ ತಂತ್ರದಿಂದ ಹೊರಬರಲು ನಿರ್ದೇಶಕರಿಗೆ ಸಾಧ್ಯವೇ ಆಗಿಲ್ಲ. ಎಂದಿನಂತೆ ಪ್ರೀತಿ ಮತ್ತು ಮುಗ್ಧತೆಯ ಪಾಠವನ್ನು ನಿರ್ದೇಶಕ ಮುಖ್ಯಪಾತ್ರಧಾರಿಯಿಂದ ಬೋಧಿಸುವುದು ಇಲ್ಲಿ ಕೂಡ ಮುಂದುವರೆದಿದೆ.
ಹಳ್ಳಿಯ ಪರಿಸರದಲ್ಲಿ, ದನವನ್ನು ಕಾಯುವವರ ನಡುವೆ ಇರಬಹುದಾದ ಗ್ರಾಮೀಣ ಪರಿಸರವನ್ನು ಪರಿಣಾಮಕಾರಿಯಾಗಿ ಹಿಡಿಯಲು ಸಿನೆಮಾ ಸೋತಿದೆ. ಗುಡ್ಡಗಾಡಿನ ನಡುವೆ ಹಳ್ಳಿಗಾಡಿನ ಪ್ರಾಕೃತಿಕ ಪರಿಸರವನ್ನು ಕ್ಯಾಮರಾಮನ್ ಸುಜ್ಞಾನಮೂರ್ತಿ ಅತಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದರು, ಸಿನೆಮಾ ಜನರ ನಡುವಿನ ಗ್ರಾಮದ ಆಳಕ್ಕೆ ಇಳಿಯುವುದೇ ಇಲ್ಲ. ಹಳ್ಳಿಯ ದಿನನಿತ್ಯದ ಆಗುಹೋಗುಗಳು ಪ್ರೇಕ್ಷಕರಿಗೆ ಎಲ್ಲಿಯೂ ಕಾಣುವುದಿಲ್ಲ. ನಗರದಲ್ಲಿ ಹೊಳೆದ ಒಂದು ಕಥೆಯನ್ನು ಗ್ರಾಮೀಣ ಹಿನ್ನಲೆಯಲ್ಲಿ ಮಾಡುತ್ತೇನೇನೆಂಬ ಮಹದಾಸೆ ಹೊತ್ತು, ಅಲ್ಲಿನ ಪರಿಸರವನ್ನು ಪರಿಣಾಮಕಾರಿಯಾಗಿ ಅಧ್ಯಯನ ಮಾಡದೆ ಚಿತ್ರಿಸಿ ಮೂಡಿಸಿರುವ ಹೀರೊ ಕೇಂದ್ರಿತ ಮಾತಿನ ಮಂಟಪವಾಗಿಬಿಡುತ್ತದೆ ಸಿನೆಮಾ.
ನಟನೆಯಲ್ಲಿ ಕನ್ನಡ ಚಿತ್ರರಂಗ ಅತಿ ಹೆಚ್ಚು ಉಪೇಕ್ಷಿಸಿರುವ ಬಿರಾದಾರ್ ಎಂದಿನಂತೆ ಅತ್ಯುತ್ತಮ ನಟನೆ ನೀಡಿ ಗಮನಸೆಳೆಯುತ್ತಾರೆ. ದುನಿಯಾ ವಿಜಯ್ ಮತ್ತು ರಂಗಾಯಣ ರಘು ಆರ್ಭಟನೆ ಅವರ ಅಭಿಮಾನಿಗಳಿಗೆ ಹುಚ್ಚೆಬ್ಬಿಸಬಹುದು. ಪ್ರಿಯಾಮಣಿ ಸಿಟ್ಟಿನ ಯುವತಿಯ ಪಾತ್ರದಲ್ಲಿ ಒಳ್ಳೆಯ ನಟನೆ ನೀಡಿದ್ದಾರೆ. ಉಳಿದಂತೆ ಎಲ್ಲ ಪೋಷಕ ನಂತರ ನಟನೆಯೂ ಗಮನಾರ್ಹ. ವಿ ಹರಿಕೃಷ್ಣ ಸಂಗೀತದಲ್ಲಿ ಅಲ್ಲಲ್ಲಿ ಮೂಡಿ ಬರುವ ಹಾಡುಗಳು ಮಾತುಗಳಿಗೆ ಬ್ರೇಕ್ ಹಾಕುತ್ತವೆ. ಆರ್ಭಟ ಮಾತುಗಳು ಮತ್ತು ಅತಿರೇಕದ ನಟನೆಯನ್ನು ತುಸು ತಗ್ಗಿಸಿ, ಕಥೆ ನಡೆಯುತ್ತಿರುವ ಪರಿಸರದ ಹಿನ್ನಲೆಯನ್ನು ಹೆಚ್ಚಿನ ವಿವರಗಳಿಂದ ಕಟ್ಟಿಕೊಟ್ಟಿದ್ದರೆ, ಸಿನೆಮಾದಲ್ಲಿ ತಾವು ಮೂಡಿಸಹೊರಟಿದ್ದ ಸಂಘರ್ಷ ಇನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ಆಪ್ತವಾಗುತ್ತಿತ್ತೇನೋ. ತಮ್ಮ ಸಾಮಾನ್ಯ ಶೈಲಿಯ ಮಾತಿನಮಂಟಪದ ಸಿನೆಮಾವನ್ನು ಮೂಡಿಸಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.

Leave a Reply

Your email address will not be published.

Facebook Auto Publish Powered By : XYZScripts.com