ಗಡ್ಡಪ್ಪ ಗಡ್ಡ ಬಿಟ್ಟಿದ್ದು ಯಾಕೆ ಗೊತ್ತಾ?

“ತಿಥಿ’ ಚಿತ್ರದ ಮೂಲಕ ಬೆಳಕಿಗೆ ಬಂದು, ಬಿಝಿಯಾದ ಗಡ್ಡಪ್ಪ, ಆ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಸರಿಗೆ ತಕ್ಕಂತೆ ಗಡ್ಡಪ್ಪ ಅವರ ಹೈಲೈಟ್ ಅಂದರೆ ಅವರ ಗಡ್ಡ. ಎಲ್ಲಾ ಓಕೆ, ಗಡ್ಡಪ್ಪ ಗಡ್ಡ ಬಿಡಲು ಕಾರಣವೇನು ಎಂದು ಕೇಳಿದರೆ ಅದರ ಹಿಂದಿನ ಕಥೆಯನ್ನು ಹೇಳುತ್ತಾರೆ ಗಡ್ಡಪ್ಪ. ಮಂಡ್ಯದ ನೊದೆಕೊಪ್ಪಲಿನ ಗಡ್ಡಪ್ಪ ಅವರ ಮೂಲ ಹೆಸರು ಚನ್ನೇಗೌಡ.

ಕೆಲ ವರ್ಷಗಳ ಹಿಂದೆ ಮನೆಯಿಂದ ಎರಡು ಕಿ.ಮೀ ದೂರದಲ್ಲಿ ಗಡ್ಡಪ್ಪ ಅವರು ಸಣ್ಣ ಹೋಟೆಲ್ವೊಂದರನ್ನು ಇಟ್ಟಿದ್ದರಂತೆ. ಸುತ್ತಮುತ್ತ ಕಾಡು, ಹೆಚ್ಚು ಮನೆಗಳಿಲ್ಲದ ಜಾಗ, ಮನೆಯಿಂದ ದೂರದಲ್ಲಿರುವ ಹೋಟೆಲ್. ಸಹಜವಾಗಿಯೇ ಕಳ್ಳರ ಭಯ ಗಡ್ಡಪ್ಪ ಅವರನ್ನು ಕಾಡಿತ್ತಂತೆ. ಇನ್ನೆಲ್ಲಿ ಕಳ್ಳರು ಹೋಟೆಲ್ಗೆ ನುಗ್ಗುತ್ತಾರೋ ಎಂಬ ಭಯದಿಂದ ಮನಸ್ಸಿನಲ್ಲೇ ದೇವರನ್ನು ನೆನೆಸಿಕೊಂಡು, “ದೇವರೇ ಕಳ್ಳರ ಕಾಟವನ್ನು ತಪ್ಪಿಸು, ನಾನು ಗಡ್ಡ ಬಿಡುತ್ತೇನೆ’ ಎಂದು ಮನಸ್ಸಿನಲ್ಲೇ ಅಂದುಕೊಂಡರಂತೆ.

ಹಾಗೆ ಬಿಟ್ಟ ಗಡ್ಡ ಹಾಗೆ ಮುಂದುವರಿದಿದೆ. ಆ ನಂತರ ಗಡ್ಡ ತೆಗೆಯುವ ಗೋಜಿಗೆ ಗಡ್ಡಪ್ಪ ಹೋಗಲಿಲ್ಲ. ಬಸ್ಸಿನ ವ್ಯವಸ್ಥೆ ಇರದ ಅವರ ಊರಿಗೆ ಗಡ್ಡಪ್ಪ ಗಡ್ಡ ಬಿಟ್ಟ ನಂತರ ಅವರಿಗೆ ಒಂದು ಬಸ್ ಕೂಡಾ ಬಂತಂತೆ. ಆ ಬಸ್ಸಿನ ಕಂಡಕ್ಟರ್ ಇವರ ಗಡ್ಡ ನೋಡಿ, ಗಡ್ಡಪ್ಪ ಎಂದು ಕರೆಯಲಾರಂಭಿಸಿದನಂತೆ. ಅಂದಿನಿಂದ ಚನ್ನೇಗೌಡ ಗಡ್ಡಪ್ಪ ಆಗಿ ಫೇಮಸ್ ಆಗಿದ್ದಾರೆ.

80 ವರ್ಷದ ಗಡ್ಡಪ್ಪ ಅವರನ್ನು ಅವರ ಮಗಳು ನೋಡಿಕೊಳ್ಳುತ್ತಿದ್ದಾರೆ. ಶೂಟಿಂಗ್ಗೆ ಕಳುಹಿಸುವುದರಿಂದ ಹಿಡಿದು ಸಂಭಾವನೆ ವಿಚಾರವನ್ನು ಅವರೇ ನೋಡಿಕೊಳ್ಳುತ್ತಾರಂತೆ. ಹಾಗಾದರೆ ಸಿನಿಮಾದವರು ದಿನಕ್ಕೆ ಗಡ್ಡಪ್ಪ ಅವರಿಗೆ ಎಷ್ಟು ಸಂಭಾವನೆ ಕೊಡುತ್ತಾರೆ ಎಂದರೆ ಗೊತ್ತಿಲ್ಲ ಎನ್ನುತ್ತಾರೆ. “ನನಗೆ ಅದೆಲ್ಲಾ ಗೊತ್ತಿಲ್ಲ. ಮಗಳು ನೋಡಿಕೊಳ್ಳುತ್ತಾಳೆ. ಸಿನಿಮಾದವರು ಕಾರು ಕಳುಹಿಸುತ್ತಾರೆ.

ಶೂಟಿಂಗ್ಗೆ ಅದರಲ್ಲಿ ಬಂದು ಹೋಗುತ್ತೇನೆ’ ಎನ್ನುತ್ತಾರೆ. ಸಿನಿಮಾದವರು ಸರಿಯಾಗಿ ಸಂಭಾವನೆ ಕೊಡುತ್ತಾರಾ ಎಂದರೆ, “ಕೆಲವರು ಕೊಡುತ್ತಾರೆ. ಇನ್ನು ಕೆಲವರು ಕೊಡುವುದಿಲ್ಲ. ಇವತ್ತು, ನಾಳೆ ಎನ್ನುತ್ತಾರೆ. ನಾನು ಅವರ ಜೊತೆ ಜಗಳವಾಡೋಕೆ ಆಗುತ್ತಾ’ ಎಂಬ ಉತ್ತರ ಅವರಿಂದ ಬರುತ್ತದೆ.

ಗಡ್ಡಪ್ಪ ಅವರನ್ನು ಕೆಲವು ಸಿನಿಮಾದವರು ಕೆಟ್ಟದಾಗಿ ಬಳಸಿಕೊಳ್ಳುತ್ತಾರೆ. ಅವರ ಬಾಯಲ್ಲಿ ಅಶ್ಲೀಲ ಸಂಭಾಷಣೆ ಹೇಳಿಸುತ್ತಾರೆ ಎಂಬ ಮಾತೂ ಇದೆ. “ನನಗೆ ಅವೆಲ್ಲಾ ಗೊತ್ತಾಗಲ್ಲ. ನಿರ್ದೇಶಕರು ಹೀಗೇ ಹೇಳಬೇಕು ಎನ್ನುತ್ತಾರೆ, ನಾನು ಹೇಳುತ್ತೇನೆ’ ಎನ್ನುತ್ತಾರೆ ಗಡ್ಡಪ್ಪ.

ಚುನಾವಣಾ ಪ್ರಚಾರಕ್ಕೆ ಕರೆಯುತ್ತಾರೆ: ಚುನಾವಣೆ ಹತ್ತಿರ ಬಂದಿದೆ. ಪ್ರತಿ ಪಕ್ಷಗಳು ಪ್ರಚಾರ ಸಭೆಗಳಲ್ಲಿ, ರೋಡ್ ಶೋಗಳಲ್ಲಿ ಜನರನ್ನು ಸೆಳೆಯಲು ಏನಾದರೊಂದು ದಾರಿ ಹುಡುಕುತ್ತಲೇ ಇರುತ್ತಾರೆ. ಅದರಲ್ಲಿ ಸಿನಿಮಾ ಕಲಾವಿದರನ್ನು ಬಳಸಿಕೊಳ್ಳುವುದು ಕೂಡಾ ಒಂದು. ಈಗ ಗಡ್ಡಪ್ಪ ಅವರನ್ನು ಚುನಾವಣಾ ಪ್ರಚಾರಕ್ಕೆ ಪಕ್ಷಗಳು ಕರೆಯುತ್ತಿವೆಯಂತೆ.

“ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಪ್ರಚಾರಕ್ಕೆ ಬರುವಂತೆ ಕರೆಯುತ್ತಿವೆ. ಆದರೆ ನಾನು ಹೋಗುತ್ತಿಲ್ಲ. ಯಾವುದಾದರೂ ಒಂದು ಪಕ್ಷಕ್ಕೆ ಹೋದರೆ ಮತ್ತೂಂದು ಪಕ್ಷಕ್ಕೆ ಬೇಜಾರು. ಅದಕ್ಕೆ ನನಗೆ ಆರೋಗ್ಯ ಸರಿಯಿಲ್ಲ ಎಂದು ತಪ್ಪಿಸುತ್ತಿದ್ದೇನೆ’ ಎನ್ನುವುದು ಗಡ್ಡಪ್ಪ ಮಾತು.

Facebook Auto Publish Powered By : XYZScripts.com