ಖಲೀಜ್’ ಮೂಲಕ ಸಂಯುಕ್ತ ಹೆಗಡೆ ಮತ್ತೆ ಕನ್ನಡಕ್ಕೆ!

ಬೆಂಗಳೂರು: ‘ಕಿರಿಕ್ ಪಾರ್ಟಿ’ ಸಿನೆಮಾದ ಅಭೂತಪೂರ್ವ ಯಶಸ್ಸು, ಇಬ್ಬರು ಚಿತ್ರನಟಿಯರನ್ನು ಕನ್ನಡಕ್ಕೆ ಅದ್ದೂರಿಯಾಗಿ ಪರಿಚಯಿಸಿತು. ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತ ಹೆಗಡೆ ನಟಿಸಿದ ಮೊದಲ ಸಿನೆಮಾದಲ್ಲಿಯೇ ಗಮನ ಸೆಳೆದ ನಟಿಯರು. ರಶ್ಮಿಕಾ ಈಗಾಗಲೇ ಹಲವು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಹಾಗು ತೆಲುಗು ಚಿತ್ರರಂಗದಲ್ಲಿ ಕೂಡ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗ ಎಂ ಟಿ ವಿ ರೋಡೀಸ್ ನಿಂದ ಹಿಂದಿರುಗಿರುವ ನಟಿ ಸಂಯುಕ್ತ ಅವರಿಗೆ ಕೂಡ ಅವಕಾಶಗಳ ಮಾಹಾಪೂರವೇ ಹರಿದುಬಂದಿದೆ. ‘ವಾಸು.. ನಾನ್ ಪಕ್ಕಾ ಕಮರ್ಷಿಯಲ್’ ಸಿನೆಮಾದಲ್ಲಿ ನಟಿಸಲು ಸಂಯುಕ್ತ ಸಹಿ ಹಾಕಿದ್ದಾರೆ. ಇದರಲ್ಲಿ ಅನಿಶ್ ತೇಜೇಶ್ವರ್ ಎದುರಿಗೆ ನಟಿಸಲಿದ್ದಾರೆ. ಹಾಗೆಯೇ ‘ಅಲೆಮಾರಿ’ ಸಿನೆಮಾ ಖ್ಯಾತಿಯ ಸಂತೋಷ್ ನಿರ್ದೇಶನ ‘ಕಾಲೇಜ್ ಕುಮಾರ್’ ಸಿನೆಮಾವನ್ನು ಕೂಡ ಒಪ್ಪಿಕೊಂಡಿದ್ದಾರೆ.

‘ಕೆಂಡಸಂಪಿಗೆ’ಯ ವಿಕ್ಕಿ ಈ ಸಿನೆಮಾದ ನಾಯಕನಟ. ಸಿನೆಮಾದ ನಿರ್ಮಾಪಕ ಪದ್ಮನಾಭ ಇದನ್ನು ಧೃಢೀಕರಿಸಿದ್ದು “‘ಕಿರಿಕ್ ಪಾರ್ಟಿ’ಯಲ್ಲಿ ಅವರ ಪಾತ್ರ ಬಹಳ ಆಪ್ತವಾಗಿತ್ತು ಮತ್ತು ನಮ್ಮ ಸಿನೆಮಾದ ಹೀರೋಯಿನ್ ಕೂಡ ಅಂತಹುದ್ದೇ ಪಾತ್ರ” ಎನ್ನುತ್ತಾರೆ.

ನಿರ್ದೇಶಕ ಸಂತೋಷ್ ಹೇಳುವಂತೆ “‘ಕಾಲೇಜ್ ಕುಮಾರ್’ ಕಾಲೇಜು ಪ್ರೇಮ ಕಥೆ ಮತ್ತು ವಿಕ್ಕಿ ಎದುರು ನಟಿಸಲು ಒಳ್ಳೆಯ ನಟಿ ಬೇಕಿತ್ತು. ‘ಕಿರಿಕ್ ಪಾರ್ಟಿ’ಯಲ್ಲಿ ಬಹಳ ಲವಲವಿಕೆಯಿಂದ ನಟಿಸಿದ್ದ ಸಂಯುಕ್ತ ಇಲ್ಲಿಗೆ ಹೊಂದಿಕೊಂಡರು ಮತ್ತು ಇಲ್ಲಿ ಕೂಡ ನ್ಯಾಯ ಸಲ್ಲಿಸುತ್ತಾರೆ ಎಂಬುದು ನನಗೆ ಖಚಿತವಾಗಿದೆ” ಎನ್ನುತ್ತಾರೆ. 

‘ಕಾಲೇಜ್ ಕುಮಾರ್’ಗೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ಟಿ ಅಳಗನ್ ಛಾಯಾಗ್ರಹಣ ಮಾಡಲಿದ್ದಾರೆ. ತಾರಾಗಣ ಅಂತಿಮವಾದ ನಂತರ ಮೇ ಮೊದಲ ವಾರದಲ್ಲಿ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. 

Courtesy: Kannadaprabha

Facebook Auto Publish Powered By : XYZScripts.com