ಕೂಡ್ಲು ರಾಮಕೃಷ್ಣ ಅವರ ಹೊಸ ಪ್ರಯೋಗ ’ಮಾರ್ಚ್ 22’

ನಿರ್ದೇಶಕ ಕೂಡ್ಲು ರಾಮಕೃಷ್ಣ ಅವರ ಹೊಸ ಚಿತ್ರ `ಮಾರ್ಚ್-22’ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕೆ ಸಜ್ಜಾಗಿದೆ. ಬೆಳಗಾವಿಯ ಚಚಡಿ ನಾಗರಾಜ ದೇಸಾಯಿಯವರ ವಾಡೆ ಮನೆಯಲ್ಲಿ ಮುಹೂರ್ತ ಸಮಾರಂಭ ನೆರವೇರಿದೆ.
ಟೈಟಲ್ ನೋಡಿದರೇನೇ ನಿರ್ದೇಶಕ ಕೂಡ್ಲು ರಾಮಕೃಷ್ಣ ಅವರು ಭಿನ್ನವಾದೊಂದು ಕಥೆಯಿಟ್ಟುಕೊಂಡು ಅಖಾಡಕ್ಕಿಳಿದಿದ್ದಾರೆಂಬ ವಿಚಾರ ಸ್ಪಷ್ಟವಾಗುತ್ತದೆ. `ಮಾರ್ಚ್-22’ ಇಡೀ ಜಗತ್ತಿಗೆ ಒಂದು ರೀತಿಯಲ್ಲಿ ವಿಶೇಷ ದಿನ. ಯಾಕೆಂದರದು ಜಲ ದಿನ ಎಂದು ಆಚರಿಸಲ್ಪಡುತ್ತದೆ. ಈ ದಿನವನ್ನೇ ಚಿತ್ರದ ಟೈಟಲ್ ಆಗಿ ಬಳಸಿಕೊಂಡಿರೋದರ ಹಿಂದೆಯೂ ನಿಖರವಾದ ಕಾರಣಗಳಿವೆ.
ನೀರಲ್ಲಿಯೂ ಜಾತಿ ಧರ್ಮ ನೋಡುವವರೂ ಇರಬಹುದು. ಆದರೆ ನೀರಿಗೆ ಅಂಥಾದ್ಯಾವ ಕಟ್ಟು ಪಾಡುಗಳೂ ಇಲ್ಲ. ಅದು ಇಡೀ ಜೀವ ಸಂಕುಲದ ಜೀವಧಾತು. ಅದು ಜಾತಿ, ಧರ್ಮ, ಪಂಥಗಳನ್ನು ಮೀರಿದ್ದು. ಇಂಥಾದ್ದೇ ಜೀವಪರ ಆಶಯವುಳ್ಳ ಕಥೆ ಹೊಂದಿರುವ ಈ ಚಿತ್ರಕ್ಕೆ ಈ ಹೆಸರಲ್ಲದೇ ಬೇರ್ಯಾವುದೂ ಸರಿ ಹೊಂದಲಿಕ್ಕಿಲ್ಲ.
ಇದೊಂದೇ ಅಲ್ಲದೇ ನೀರಿನ ಸದ್ಬಳಕೆಯ ಬಗೆಗೆ ಅರಿವು ಮೂಡಿಸುವಂಥಾ ವಿಚಾರವೂ ಈ ಕಥೆಯಲ್ಲಿ ಅಡಕವಾಗಿದೆಯಂತೆ. ಅಂತೂ ಕೂಡ್ಲು ರಾಮಕೃಷ್ಣ ಅವರು ಈ ಚಿತ್ರದ ಮೂಲಕ ಹೊಸ ಪ್ರಯೋಗವೊಂದಕ್ಕೆ ಸಜ್ಜುಗೊಂಡಂತಿದೆ.
ಈ ಚಿತ್ರಕ್ಕೆ ಆರ್ಯವರ್ಧನ, ಕಿರಣ್ ರಾವ್, ಮೇಘಶ್ರೀ, ದೀಪಾ ಶೆಟ್ಟಿ, ಶರತ್ ಲೋಹಿತಾಶ್ವ, ರವಿಶಂಕರ್, ರವಿಕಾಳೆ, ಜೈಜಗದೀಶ್, ವಿನಯಾ ಪ್ರಸಾದ್, ಪದ್ಮಜಾ ರಾವ್, ಪವಿತ್ರ ಲೋಕೇಶ್ ಮುಂತಾದವರ ತಾರಾಗಣವಿದೆ.
ಇನ್ನುಳಿದಂತೆ ರವಿಶೇಖರ್ ಸಂಗೀತ, ಸುಭಾಶ್ ಕಡಕೋಳ ಕಲೆ, ಕೆ ಜಗದೀಶ ರೆಡ್ಡಿ ಸಹಕಾರ ನಿರ್ದೇಶನ, ಬಿ.ಎ ಮಧು ಸಂಭಾಷಣೆ, ಕರ್ವಾ ಖ್ಯಾತಿಯ ಮೋಹನ್ ಅವರ ಛಾಯಾಗ್ರಹಣ, ಬಸವರಾಜ ಅರಸ್ ಸಂಕಲನವಿರುವ ಈ ಚಿತ್ರಕ್ಕೆ ಹರೀಶ್ ಶೇರೆಗಾರ್, ನರೇಂದ್ರ ಹಾಗೂ ರಾಜಶೇಖರ್ ನಿರ್ಮಾಪಕರಾಗಿದ್ದಾರೆ. ಸರವಣ ಮತ್ತು ನಾಗರಾಜ ಹಾಸನ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
Courtesy: Balkani News

Facebook Auto Publish Powered By : XYZScripts.com