ಕಿರುತೆರೆ ಶೇಕ್ ಆಗ್ಬೇಕು ಅಂದ್ರೆ ನಿರ್ಮಾಪಕರು ತೊಡೆ ತಟ್ಟಿ ನಿಲ್ಲಬೇಕಷ್ಟೆ

ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನುಗಮನಿಸಿದರೆ ಕಿರುತೆರೆಯೆಂಬ ಮಹಾನ್ ಭೂತ ಇಡೀ ಹಿರಿತೆರೆಯನ್ನು ಸಂಪೂರ್ಣವಾಗಿ ಮುಳುಗಿಸಿ ತನ್ನ ಅಧಿಪತ್ಯವನ್ನು ಜನ ಸಾಮನ್ಯರಲ್ಲಿ ಸ್ಥಾಪಿಸಬೇಕೆಂದು ಚಂಡಿ ಹಿಡಿದು ಕೂತಿರುವಂತಿದೆ.
ಕಿರುತೆರೆಯಲ್ಲಿ ಮೂಡಿಬರುತ್ತಿರುವ ಅದ್ದೂರಿ ಮೆಗಾ ಧಾರಾವಾಹಿಗಳು, ಉತ್ತಮ ಗುಣಮಟ್ಟ, ಹೊಸ ಹೊಸ ಕಲಾವಿದರ ಪರಿಚಯ, ಉತ್ತಮ ಪ್ರಚಾರ ತಂತ್ರ, ಹೊಸ ಹೊಸ ಕಾರ್ಯಕ್ರಮಗಳು, ಹಾಗೆ ಜನರಲ್ಲಿ ಒಂದು ರೀತಿಯ ಕುತೂಹಲ, ಭ್ರಮೆಯನ್ನು ಉಂಟು ಮಾಡುವಂತಿವೆ. ರಿಯಾಲಿಟಿ ಶೋ ಎಂಬ ಹಲವಾರು ತಂತ್ರಗಳಿಂದ ಹಿರಿತೆರೆಗೆ ಕಿರುತೆರೆ ಸಡ್ಡು ಹೊಡೆದು ಎಲ್ಲಾ ಪ್ರೇಕ್ಷಕರನ್ನು ಮನೆಯಲ್ಲೇ ಪಟ್ಟು ಹಿಡಿದು ಕೂರುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ. ಇದು ಈಗ ಹಿರಿತೆರೆಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿರುವುದು ಸುಳ್ಳಲ್ಲ.
ಮೊದಲೇ ನಮ್ಮ ಹಿರಿತೆರೆಯ ಮಾರುಕಟ್ಟೆ ತುಂಬಾ ಸಂಕೀರ್ಣವಾದದ್ದು. ಅದರ ಜೊತೆಗೆ ಪರಭಾಷಾ ಸಿನಿಮಾಗಳ ಹಾವಳಿ, ಕನ್ನಡಕ್ಕಿಂತ ಬೇರೆ ಸಿನಿಮಾಗಳನ್ನೇ ನೋಡುವ ನಮ್ಮ ಕೆಲವು ಕನ್ನಡಿಗರ ಹುಚ್ಚು ವ್ಯಾಮೋಹ. ಇದೆಲ್ಲದರ ಜೊತೆಗೆ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡೋದಿಲ್ಲ ಅನ್ನೋ ಪ್ರೇಕ್ಷಕರ ನೇರ ಆರೋಪ ಬೇರೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಸಿನಿಮಾವನ್ನು ನಂಬಿಕೊಂಡಿರುವ ಕಲಾವಿದರು, ಕಾರ್ಮಿಕರು, ನಿರ್ಮಾಪಕರು ಹೇಗೋ ಒದ್ದಾಡಿಕೊಂಡು ಸಿನಿಮಾ ಮಾಡ್ತಾ ಹಿರಿತೆರೆಯ ಅಸ್ತಿತ್ವವನ್ನು ಉಳಿಸೋದಕ್ಕೆ ಶ್ರಮಪಡ್ತಿದ್ದಾರೆ.
ಇಂತಹ ಹೊತ್ತಲ್ಲಿ ಈಗ ನಮ್ಮ ನಿರ್ಮಾಪಕರಿಗೆ ಭಯ ಶುರು ವಾಗಿರೋದು ನಮ್ಮ ಸ್ಟಾರ್ ನಟರುಗಳು ಕಿರುತೆರೆಯಲ್ಲಿ ರಿಯಾಲಿಟಿ ಶೋ ಗಳಿಗೆ ಹೋಗುತ್ತಿರುವುದು. ಸಿನಿಮಾದಲ್ಲಿನ ಸ್ಟಾರ್ ನಟರೆಲ್ಲಾ ಕಿರುತೆರೆಗೆ ಹೋಗಿಬಿಟ್ರೆ ಅದೇ ಸ್ಟಾರ್ ನಟರ ಸಿನಿಮಾಗಳನ್ನು ಥೇಟರ್ ಗಳಿಗೆ ಬಂದು ನೋಡೋರ ಸಂಖ್ಯೆ ಕಡಿಮೆಯಾಗುತ್ತೆ. ಅದಕ್ಕೆ ದಯವಿಟ್ಟು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಯಾವುದೇ ಸಿನಿಮಾ ನಟರು ನಟಿಸಬಾರದು, ನಿಮ್ಮನ್ನೇ ನಂಬಿಕೊಂಡಿರುವ ನಿರ್ಮಾಪಕರನ್ನು ಉಳಿಸಿ ಅನ್ನೋದು ಎಲ್ಲರ ಮನವಿ.
ಆದರೆ ಅದನ್ನು ಯಾರೂ ಕೇರ್ ಮಾಡದೇ ತಮ್ಮ ಪಾಡಿಗೆ ತಾವು, ತಮಗೆ ಸರಿ ಅನ್ನಿಸಿದ್ದನ್ನ ಮಾಡ್ತಾನೆ ಇದ್ದಾರೆ. ನಾವು ಕಲಾವಿದರು. ನಮಗೆ ಕಿರುತೆರೆ, ಹಿರಿತೆರೆ ಅನ್ನೋ ಭೇದ ಭಾವ ಇಲ್ಲ. ಎಲ್ಲಿ ಅವಕಾಶ ಇರುತ್ತೋ ಅಲ್ಲಿ ಅಭಿನಯಿಸ್ತೀವಿ ಅನ್ನೋದು ನಮ್ಮ ಸ್ಟಾರ್ ನಟರ ಉತ್ತರ. ಇದರಲ್ಲಿ ಯಾವುದು ತಪ್ಪು, ಯಾವುದು ಸರಿ?
ಇಲ್ಲಿ ಯಾರದ್ದೂ ತಪ್ಪಿಲ್ಲ. ಎಲ್ಲರಿಗೂ ತಾವು ಬೆಳೀಬೇಕು. ಹೆಸರು ಮಾಡಬೇಕು, ಹಣ ಮಾಡಬೇಕು ಅನ್ನೋ ಉದ್ದೇಶ, ಆಸೆ, ಹಪಾಹಪಿ ಇದ್ದೇ ಇರುತ್ತೆ. ಅದಕ್ಕೆ ಏನ್ ಬೇಕೋ ಅದನ್ನ ಮಾಡೇ ಮಾಡ್ತಾರೆ. ಅದಕ್ಕೆ ಕಿರುತೆರೆಯಾಗಲಿ, ಹಿರಿತೆರೆಯಾಗಲಿ, ನಟರಾಗಲಿ, ನಿರ್ಮಾಪಕರಾಗಲಿ ಹೊರತಲ್ಲ.
ಹಾಗಾಗಿ ಈಗ ನಮ್ಮ ಮುಂದಿರೋದು ಒಂದೇ ದಾರಿ. ಕಿರುತೆರೆಗೆ ಅಂಟಿಕೊಂಡು ಕೂತಿರುವ ಜನರನ್ನ ಥೇಟರಿಗೆ ಬರೋ ಹಾಗ್ ಮಾಡ್ಬೇಕು ಅಂದ್ರೆ ನಾವು ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡ್ಬೇಕು. ಏನೇ ಆದ್ರೂ ನಾವು ಹೆದರಲ್ಲ ನಿಮ್ಮನ್ನ ಬೀಟ್ ಮಾಡ್ತಿವಿ ಅಂತ ಸಡ್ಡು ಹೊಡೆದು ನಮ್ಮ ನಿರ್ಮಾಪಕರು ತೊಡೆ ತಟ್ಟಿ ನಿಂತ್ರೆ ಇದ್ಯಾವುದು ಅಸಾಧ್ಯವಲ್ಲ. ಅಷ್ಟು ಧೈರ್ಯ, ತಾಕತ್ತು ನಮ್ಮ ಹಿರಿತೆರೆಗೆ, ನಮ್ಮ ಅನ್ನದಾತ ನಿರ್ಮಾಪಕರುಗಳಿಗೆ ಖಂಡಿತ ಇದೆ. ಯಾರಿಗೂ ಹೆದರದೆ, ಜಗ್ಗದೆ, ಮುನ್ನುಗ್ಗಬೇಕು. ಪ್ರಯತ್ನಿಸಬೇಕಷ್ಟೆ…ಸದಾ ನಮ್ಮ ಬೆಂಬಲ ನಿಮಗೆ ಇರುತ್ತೆ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com