ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದ ‘ಡ್ರಾಮಾ ಜ್ಯೂನಿಯರ್ಸ್’

‘ಡ್ರಾಮಾ ಜ್ಯೂನಿಯರ್ಸ್’ ಮೂಲಕ ಇಡೀ ಕರ್ನಾಟಕವನ್ನೇ ನಕ್ಕು ನಗಿಸುತ್ತಿದ್ದ ಪುಟಾಣಿ ಪಂಟ್ರುಗಳು ಈಗ ಸ್ಯಾಂಡಲ್ ವುಡ್ ಪರದೆ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ.

ಇಷ್ಟು ದಿನ ಕಿರುತೆರೆಯಲ್ಲಿ ಕಚಗುಳಿಯಿಡುತ್ತಿದ್ದ ‘ಡ್ರಾಮಾ ಜ್ಯೂನಿಯರ್ಸ್’ ಈಗ ಬೆಳ್ಳಿತೆರೆಯಲ್ಲಿ ಮಾಸ್ ಡೈಲಾಗ್ ಗಳ ಮೂಲಕ ಮಿಂಚು ಹರಿಸುತ್ತಿದ್ದಾರೆ.

ಹೌದು, ‘ಡ್ರಾಮಾ ಜ್ಯೂನಿಯರ್ಸ್’ನ ಎಲ್ಲ ಮಕ್ಕಳು ಒಟ್ಟಾಗಿ ಒಂದು ಸಿನಿಮಾ ಮಾಡ್ತಿದ್ದು, ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಯಾವುದು ಆ ಚಿತ್ರ? ಯಾವ ಯಾವ ಮಕ್ಕಳು ಬಣ್ಣ ಹಚ್ಚಿದ್ದಾರೆ. ಮುಂದೆ ಓದಿ……

ವಿಕ್ರಮ್ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಎಳೆಯರು ನಾವು ಗೆಳೆಯರು’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ‘ಡ್ರಾಮಾ ಜ್ಯೂನಿಯರ್ಸ್’ ಮಕ್ಕಳು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

ಈಗಾಗಲೇ ಬೆಳ್ಳಿತೆರೆಯಲ್ಲಿ ಅಭಿನಯಿಸಿರುವ ಅಚಿಂತ್ಯ ಈಗ ಮತ್ತೊಂದು ಚಿತ್ರದ ಮೂಲಕ ಮಿಂಚುತ್ತಿದ್ದಾರೆ. ಎಸ್.ನಾರಾಯಣ್ ನಿರ್ದೇಶನದ ‘ಮನಸು ಮಲ್ಲಿಗೆ’ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿ ಗಮನ ಸೆಳೆದಿದ್ದ ಅಚಿಂತ್ಯ, ‘ಎಳೆಯರು ನಾವು ಗೆಳೆಯರು’ ಚಿತ್ರದಲ್ಲಿ ಮಾಸ್ ಡೈಲಾಗ್ ಹೊಡೆದು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಕೇವಲ ಅಚಿಂತ್ಯ ಮಾತ್ರವಲ್ಲದೆ ಡ್ರಾಮಾ ಜ್ಯೂನಿಯರ್ಸ್ ನಲ್ಲಿದ್ದ ನಿಹಾಲ್, ಅಮೋಘ್, ಮಹೇಂದ್ರ, ಅಭಿಷೇಕ್, ತುಷಾರ್, ಸೂರಜ್, ಪುಟ್ಟರಾಜು, ತೇಜಸ್ವಿನಿ, ಮೊದಲಾದ ಗೆಳೆಯರು, ಗೆಳೆಯರಾಗಿ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದು ಮಕ್ಕಳ ಚಿತ್ರವಾದರೂ ಕಮರ್ಷಿಯಲ್ ಚಿತ್ರಕ್ಕೆ ಬೇಕಾಗುವ ಎಲ್ಲಾ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆಯಂತೆ. ಮೈಸೂರು, ರಾಮನಗರ, ಶಿವಮೊಗ್ಗ ಸೇರಿದಂತೆ ಸುಂದರ ತಾಣಗಳಲ್ಲಿ ಈಗಾಗಲೇ ಸುಮಾರು ಒಂದೂವರೆ ತಿಂಗಳ ಕಾಲ ಶೂಟಿಂಗ್ ನಡೆದಿದೆ. ನಾಗರಾಜ್ ಗೋಪಾಲ್ ಈ ಚಿತ್ರವನ್ನ ನಿರ್ಮಿಸುತ್ತಿದ್ದು, ಜೂನ್ ಮೊದಲ ವಾರದಲ್ಲಿ ತೆರೆಗೆ ಕಾಣಲಿದೆ.

Courtesy: Filmibeat Kannada

Facebook Auto Publish Powered By : XYZScripts.com