‘ಕಿರಿಕ್ ಪಾರ್ಟಿ’ ಚಂದನ್ ಆಚಾರ್ ಆಗಲಿದ್ದಾರೆ ಹೀರೋ

‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರಿಗೂ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ನಿರ್ದೇಶಕ ರಿಶಬ್ ಶೆಟ್ಟಿ ಹಾಗೂ ನಾಯಕ ರಕ್ಷಿತ್ ಶೆಟ್ಟಿ ಹೊಸ ಹೊಸ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ‘ಕಿರಿಕ್ ಪಾರ್ಟಿ’ ಮೂಲಕ ಪರಿಚಿತರಾದ ರಶ್ಮಿಕಾ ಮಂದಣ್ಣಗೆ ಸ್ಯಾಂಡಲ್ ವುಡ್ ನಲ್ಲಿ ಇರುವ ಬೇಡಿಕೆ ನಿಮಗೆ ಗೊತ್ತೇ ಇದೆ. ಹಾಗೇ, ಸಂಯುಕ್ತ ಹೆಗಡೆಗೂ ಅವಕಾಶಗಳು ಕಮ್ಮಿ ಏನಿಲ್ಲ ಬಿಡಿ.

ಇನ್ನೂ, ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಸ್ನೇಹಿತರಾಗಿ ಅಭಿನಯಿಸಿದ್ದ ಹುಡುಗರು ಒಬ್ಬೊಬ್ಬರಾಗೇ ಹೀರೋ ಪಟ್ಟಕ್ಕೆ ಏರುತ್ತಿದ್ದಾರೆ. ರಕ್ಷಿತ್ ಗೆಳೆಯರ ಪೈಕಿ ಒಬ್ಬರಾಗಿ ನಟಿಸಿದ್ದ ಅರವಿಂದ್ ಅಯ್ಯರ್ ಈಗಾಗಲೇ ‘ಭೀಮಸೇನ ನಳಮಹಾರಾಜ’ ಹಾಗೂ ‘777 ಚಾರ್ಲಿ’ ಚಿತ್ರಗಳಿಗೆ ‘ನಾಯಕ’ನಾಗಿದ್ದಾರೆ. ಈಗ ಅದೇ ‘ಕಿರಿಕ್ ಪಾರ್ಟಿ’ ಚಿತ್ರದ ರಕ್ಷಿತ್ ಸ್ನೇಹಿತರ ಬಳಗದಲ್ಲಿ ಇದ್ದ ಮತ್ತೋರ್ವ ಯುವಕ ಹೀರೋ ಆಗಲು ಸಜ್ಜಾಗಿದ್ದಾರೆ.

ರಕ್ಷಿತ್ ಫ್ರೆಂಡ್ ಈಗ ಹೀರೋ ಚಂದನ್ ಆಚಾರ್ ಈಗ ಹೀರೋ, ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಫ್ರೆಂಡ್ಸ್ ಗ್ಯಾಂಗ್ ನಲ್ಲಿದ್ದ ಚಂದನ್ ಆಚಾರ್ ಈಗ ಕನ್ನಡ ಚಿತ್ರವೊಂದಕ್ಕೆ ಹೀರೋ ಆಗಲಿದ್ದಾರೆ.

ಮೈಸೂರಿನ ಹುಡುಗ ಚಂದನ್ ರಂಗಭೂಮಿ ಕಲಾವಿದ, ಮೈಸೂರಿನಲ್ಲಿ ಹುಟ್ಟಿ ಬೆಳೆದ ಚಂದನ್ ಆಚಾರ್, ರಂಗಭೂಮಿಗೆ ಆಕರ್ಷಿತರಾಗಿ ‘ನಟನಾ’ ತಂಡ ಸೇರಿದರು. ‘ಸಂಕ್ರಾಂತಿ’, ‘ಮಲೆಗಳಲ್ಲಿ ಮದುಮಗಳು’ ನಾಟಕಗಳಿಗೆ ಬಣ್ಣ ಹಚ್ಚಿದ ಚಂದನ್, ‘Rambo’, ‘ಕಿರಿಕ್ ಪಾರ್ಟಿ’, ‘ಮುಗುಳುನಗೆ’, ‘ದಯವಿಟ್ಟು ಗಮನಿಸಿ’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಏಳು ವರ್ಷಗಳಿಂದ ನಿರ್ದೇಶಕ ಕೃಷ್ಣ ಹಾಗೂ ಆರ್.ಚಂದ್ರು ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಆರ್.ವೆಂಕಟೇಶ್ ಬಾಬು ಇದೀಗ ಸ್ವತಂತ್ರ ನಿರ್ದೇಶಕರಾಗಲು ಮನಸ್ಸು ಮಾಡಿದ್ದಾರೆ. ಆರ್.ವೆಂಕಟೇಶ್ ಬಾಬು ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಚಂದನ್ ಆಚಾರ್ ಹೀರೋ ಆಗಲಿದ್ದಾರೆ. ಆರ್.ವೆಂಕಟೇಶ್ ಬಾಬು ನಿರ್ದೇಶನದ ಆರ್.ವಿಜಯ್ ಕುಮಾರ್ ನಿರ್ಮಾಣದ ಚಂದನ್ ಆಚಾರ್ ಅಭಿನಯದ ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಮಾರ್ಚ್ ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ.

Facebook Auto Publish Powered By : XYZScripts.com