ಕಿಚ್ಚನ ಅಭಿಮಾನಕ್ಕೆ ಮರುಳಾಗಿ ಕನ್ನಡ ಕಲಿಯುತ್ತಿರುವ ತಮಿಳಿಗರು

ಸಿನಿಮಾ ನಟರು ಸಾಮಾನ್ಯ ಜನರ ಮೇಲೆ ಪ್ರಭಾವ ಬೀರುತ್ತಾರೆ ಎಂಬುದು ಅಕ್ಷರಹಃ ನಿಜ. ಅದು ಅವರ ಸ್ಟೈಲ್, ಕಾಸ್ಟ್ಯೂಮ್, ಅವರ ವ್ಯಕ್ತಿತ್ವ ಅಥವಾ ಬೇರೆ ಏನೇ ಆಗಿರಬಹುದು. ನೆಚ್ಚಿನ ನಟರಂತೆ ತಾವು ಮಾಡಲು ಇಚ್ಛಿಸುತ್ತಾರೆ.

ಆದ್ರೆ, ಇಲ್ಲೊಬ್ಬ ಅಭಿಮಾನಿ ಕಿಚ್ಚ ಸುದೀಪ್ ಅವರಿಗೋಸ್ಕರ ಕನ್ನಡ ಭಾಷೆಯನ್ನ ಕಲಿಯುತ್ತಿದ್ದಾನಂತೆ. ಹೌದು, ಈ ಅಭಿಮಾನಿ ಮೂಲತಃ ಕನ್ನಡದವರಲ್ಲ, ತಮಿಳುನಾಡಿನವರು. ಸುದೀಪ್ ಅವರ ಅಭಿಮಾನಿಯಾಗಿರುವ ಈತ ಕಿಚ್ಚನಿಗಾಗಿ ಕನ್ನಡ ಕಲಿಯುತ್ತಿದ್ದಾನಂತೆ.

ಹೀಗಂತಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು, ಇದಕ್ಕೆ ಸುದೀಪ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ”ಸರ್ ನಾನು ತಮಿಳುನಾಡಿನವನು. ನನಗೆ ನೀವಂದ್ರೆ ತುಂಬಾ ಇಷ್ಟ. ನಾನು ಕನ್ನಡ ಕಲಿಯುತ್ತಿದ್ದೇನೆ. ನಾನು ನಿಮ್ಮ ಡಬ್ಬಿಂಗ್ ಸಿನಿಮಾಗಳಾದ ‘ಈಗ’, ‘ಬಾಹುಬಲಿ’, ‘ಪುಲಿ’, ‘ರಕ್ತಚರಿತ್ರ’ ನೋಡಿದ್ದೇನೆ. ನಾನು ನಿಮ್ಮ ಅಭಿನಯಕ್ಕೆ ಮತ್ತು ನಿಮ್ಮ ಕಿಲ್ಲಿಂಗ್ ಲುಕ್ ಗೆ ಮನಸೋತಿದ್ದೇನೆ. ನಾನು ನಿಮ್ಮ ಉಳಿದ ಚಿತ್ರಗಳನ್ನ ನೋಡಲು ನಿರ್ಧರಿಸಿದ್ದು, ಅದಕ್ಕಾಗಿ ಕನ್ನಡ ಕಲಿಯುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಸುದೀಪ್ ಕೂಡ ಪ್ರತಿಕ್ರಿಯಿಸಿದ್ದು, ”ನೀನು ಕನ್ನಡ ಕಲಿಯಲು ಶ್ರಮ ಪಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ” ಎಂದಿದ್ದಾರೆ.

ಸದ್ಯ, ‘ದಿ ವಿಲನ್’ ಚಿತ್ರದ ಚಿತ್ರೀಕರಣ ಮುಗಿಸಿರುವ ಸುದೀಪ್ ಮುಂದಿನ ತಿಂಗಳಿನಿಂದ ಪೈಲ್ವಾನ್ ಚಿತ್ರವನ್ನ ಆರಂಭಿಸಲಿದ್ದಾರೆ. ಈ ಮಧ್ಯೆ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 151ನೇ ಸಿನಿಮಾದಲ್ಲೂ ಕಿಚ್ಚ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಈ ಎಲ್ಲ ಚಿತ್ರಗಳ ಜೊತೆಗೆ ಹಾಲಿವುಡ್ ಸಿನಿಮಾ ಕೂಡ ಸುದೀಪ್ ಮಾಡುತ್ತಿದ್ದಾರೆ.

Facebook Auto Publish Powered By : XYZScripts.com