ಕಾಬಿಲ್‌ನ ಪ್ರೇಮಕ್ಕೆ ವಿಮರ್ಶಕರು ಏನಂದ್ರು?

ಹೃತಿಕ್ ರೋಷನ್ ಮತ್ತು ಯಾಮಿ ಗೌತಮ್ ಅಂಧರಾಗಿ ಕಾಣಿಸಿಕೊಂಡಿರುವ ‘ಕಾಬಿಲ್’ ಚಿತ್ರ ನೆನ್ನೆ (ಜನವರಿ 25) ತೆರೆ ಕಂಡಿದೆ. ಭಾವಲೋಕದಲ್ಲಿನ ಕ್ರೌರ್ಯದ ಕಥನ ನೋಡಿ ಅಂದರ ಪ್ರೇಮ ಕುರುಡಲ್ಲ ಎಂದು ಹೇಳಿ ಚಿತ್ರ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.[‘ಕಾಬಿಲ್’ ಅಸಾಧಾರಣ, ಅಚ್ಚರಿದಾಯಕ, ಅವಾರ್ಡ್ ವಿನ್ನಿಂಗ್ ಚಿತ್ರ]

‘ಕಾಬಿಲ್’ ಚಿತ್ರಕ್ಕೆ ಸಂಜಯ್ ಗುಪ್ತಾ ಆಕ್ಷನ್ ಕಟ್ ಹೇಳಿದ್ದು, ರಾಜೇಶ್ ರೋಷನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಅಂದವಾದ ಅಂಧರ ಕಥೆ ನೋಡಿ ವಿಮರ್ಶಕರು ಏನಂದ್ರು?[‘ಕಾಬಿಲ್‌’ ಚಿತ್ರ ತಂಡದಿಂದ ‘ಕುಚ್‌ ದಿನ್’ ವೀಡಿಯೊ ಸಾಂಗ್ ರಿಲೀಸ್]

ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ ‘ಕಾಬಿಲ್’ ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ‘ಕಾಬಿಲ್’ ಚಿತ್ರಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು ನೋಡೋಣ ಬನ್ನಿ..

ಭಾವಲೋಕದಲ್ಲಿ ಕ್ರೌರ್ಯದ ಕಥನ – ಪ್ರಜಾವಾಣಿ

ಜಿಗಿತ ಬಯಸದೆ ಇರುವ ಮಾದರಿಯಲ್ಲೇ ರಂಜನೆಯ ಹುಡುಕಾಟ ನಡೆಸುವ ಚಿತ್ರಕರ್ಮಿಗಳಿದ್ದಾರೆ. ಸುರಕ್ಷಿತವೂ ಇದ್ದುದರಲ್ಲೇ ಕೊಂಚ ಭಿನ್ನವೂ ಆದ ಅಂಥವರ ನಿಲುವಿಗೆ ಉದಾಹರಣೆ ‘ಕಾಬಿಲ್’. ಚಿತ್ರದ ನಿರೂಪಣೆಯಲ್ಲಿಯೂ ವೃಥಾ ಕಸರತ್ತುಗಳಿಲ್ಲ. ಅಂಧ ನಾಯಕ ಸಾಕ್ಷಿಗಳನ್ನೇ ಉಳಿಸದೆ ಕ್ರೂರಿಗಳ ಪ್ರಾಣಾಪೋಷನ ತೆಗೆದುಕೊಳ್ಳುವ ಕಥೆಯಲ್ಲಿ ಕ್ರೀಡೆ ಕೊಡುವಂಥ ಕುತೂಹಲವಿದೆ. ಸಿನಿಮಾದ ಇನ್ನೊಂದು ಗುಣಾತ್ಮಕ ಅಂಶ ಸಂಯಮ. ಬುದ್ಧಿವಂತಿಕೆಯ ದೃಶ್ಯಗಳನ್ನು ಉತ್ಪ್ರೇಕ್ಷೆ ಇಲ್ಲದೆ ತೋರಿರುವುದನ್ನು ನಿರ್ದೇಶಕರ ಜಾಣ್ಮೆ ಎಂದೇ ಭಾವಿಸಬೇಕು.ಹೃತಿಕ್ ರೋಷನ್ ಅವರದ್ದು ಹೃದ್ಯ ಅಭಿನಯ. ಕುರುಡನಾಗಿ ಭಾವ ತುಳುಕಿಸುವುದು ತಮಾಷೆಯಲ್ಲ. ಅವರ ನೃತ್ಯ ಲಾಲಿತ್ಯ ಪೋಷಿಸಿರುವ ರೀತಿಯೂ ಮೆಚ್ಚುಗೆಗೆ ಅರ್ಹ. ಯಾಮಿ ಗೌತಮ್‌ ಕೂಡ ಅಭಿನಯ ಪಾಠ ಕಲಿತಿರುವುದು ಒಳ್ಳೆಯ ಬೆಳವಣಿಗೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನರೇಂದ್ರ ಝಾ ಇಷ್ಟವಾಗುತ್ತಾರೆ. ರೋನಿತ್ ರಾಯ್ ಅತಿ ತಣ್ಣಗೆ ನಟಿಸಲು ಹೋಗಿರುವುದು ಫಲ ನೀಡಿಲ್ಲ. ಸಂದೀಪ್ ಚಟರ್ಜಿ, ಅಯಾಂಕಾ ಬೋಸ್ ಹೆಚ್ಚು ‘ಕ್ಲೋಸಪ್ ಶಾಟ್ಸ್’ ಸೆರೆಹಿಡಿದಿರುವುದು ಸಿನಿಮಾದ ಸೌಂದರ್ಯ ಹೆಚ್ಚಿಸಿದೆ. ವಿಷಾದದಲ್ಲೂ ಹೃತಿಕ್ ಅವರನ್ನು ಚೆಂದಗಾಣಿಸಿರುವುದನ್ನು ಪಕ್ಕಕ್ಕೆ ಇಡಬೇಕು. ಸೇಡಿನ ಕಥಾನಕಗಳು ಮತ್ತೆ ಮತ್ತೆ ಮೂಡುತ್ತಿರುತ್ತವೆ; ಕಪ್ಪು-ಬಿಳುಪು ಧೋರಣೆಯೂ.

ಅಂದವಾಗಿದೆ ಅಂಧರ ಕಥೆ – ವಿಜಯವಾಣಿ

ವಿಕಲಾಂಗರ ಮೇಲೆ ನಡೆಯುವ ದೌರ್ಜನ್ಯಗಳ ಕುರಿತು ಆಗಾಗ ವರದಿಗಳಾಗುತ್ತಿರುತ್ತವೆ. ಆದರೆ ‘ಕಾಬಿಲ್’ ಮೂಲಕ ಅದರ ವಿರುದ್ಧ ಹೋರಾಡುವ ಇಚ್ಛಾಶಕ್ತಿ ತೋರಿದ್ದಾರೆ ನಿರ್ದೇಶಕ ಸಂಜಯ್ ಗುಪ್ತಾ. ಅಂಧರಾದವರು ಎಷ್ಟೇ ಬುದ್ಧಿವಂತರಾದರೂ ಹೀಗೆಲ್ಲ ಮಾಡಲು ಸಾಧ್ಯವಾ ಎಂಬ ಅನುಮಾನ ಮೂಡಬಹುದು. ಆದರೆ ಸಿನಿಮಾಗಳಲ್ಲಿ ನೋ ಲಾಜಿಕ್ ಓನ್ಲಿ ಮ್ಯಾಜಿಕ್, ಹೀಗಾಗಿ ಎಲ್ಲವೂ ಸಾಧ್ಯ ಅಂತ ನೋಡಿಕೊಂಡು ಹೋದರೆ ಒಳ್ಳೆಯದು. ಅನಿರೀಕ್ಷಿತ ತಿರುವುಗಳು ಥ್ರಿಲ್ ನೀಡುತ್ತವೆಯಾದರೂ, ಅಷ್ಟೇ ಅನಿರೀಕ್ಷಿತವಾಗಿ ಬರುವ ಹಾಡುಗಳು ಕಥೆಯನ್ನು ಎಳೆಯುತ್ತವೆ. ಆದರೂ ಸಿನಿಮಾ ಎಲ್ಲೂ ಬೋರ್ ಹೊಡೆಸದಿರುವುದು ನಿರ್ದೇಶಕರ ಹೆಚ್ಚುಗಾರಿಕೆ. ಇನ್ನು ಹೃತಿಕ್ ರೋಶನ್ ಅವರ ನಟನೆ ಸಿನಿಮಾದ ಜೀವಾಳ. ನ್ಯೂನತೆಗಳನ್ನೇ ಬಂಡವಾಳ ಮಾಡಿಕೊಳ್ಳುವ ಚತುರತೆ ಚಿತ್ರದ ಪ್ಲಸ್ ಪಾಯಿಂಟ್. ಕ್ಯೂಟ್ ಮತ್ತು ಬಬ್ಲಿಯಾಗಿ ಕಾಣುವ ಯಾಮಿ ಗೌತಮ್ ಸಹ ನಟನೆಯಲ್ಲಿ ಹಿಂದೆ ಬಿದ್ದಿಲ್ಲ. ಕೆಲವೆಡೆ ಅತಿ ಅನ್ನಿಸಿದರೂ, ಅಂಧರಾಗಿ ಸುಂದರವಾಗಿ ನಟಿಸಿರುವ ಇಬ್ಬರಿಗೂ ಬೋನಸ್ ಅಂಕಗಳು. ಖಳರಾಗಿ ರೋನಿತ್ ಮತ್ತು ರೋಹಿತ್ ರಾಯ್ ಸಹೋದರರು ಹಾಗೂ ಪೊಲೀಸ್ ಅಧಿಕಾರಿಯಾಗಿ ನರೇಂದ್ರ ಝಾ ಗಮನ ಸೆಳೆಯುತ್ತಾರೆ. ರಾಜೇಶ್ ರೋಶನ್ ಸಂಗೀತ ಸಂಯೋಜಿಸಿರುವ ಹಾಡುಗಳಲ್ಲಿ ಮೋನ್ ಅಮೌರ್ ಕುಣಿಸಿದರೆ, ಟೈಟಲ್ ಹಾಡು ಗುನುಗಿಸುತ್ತದೆ. ಮೊದಲಾರ್ಧದಲ್ಲಿ ನವಿರಾದ ಪ್ರೇಮ ಕಥೆ, ದ್ವಿತೀಯಾರ್ಧದಲ್ಲಿ ಸೇಡಿನ ವ್ಯಥೆ ಹೇಳುವ ‘ಕಾಬಿಲ್’ ಒಮ್ಮೆ ನೋಡಲಡ್ಡಿಯಿಲ್ಲ.

 

Leave a Reply

Your email address will not be published.

Facebook Auto Publish Powered By : XYZScripts.com