ಕಾತರದ ಪ’ರಾಗ’.!

ಬರೀ ಬಿಲ್ಡಪ್ ಮತ್ತು ಮರ ಸುತ್ತೋ ಕಥೆಗಳನ್ನು ಕಂಡೂ ಕಂಡು ರೋಸತ್ತಿದ್ದ ಕನ್ನಡದ ಪ್ರೇಕ್ಷಕರು ಹೊಸಾ ಅಲೆಯ ಚಿತ್ರಗಳಿಗೆ ಒತ್ತಾಸೆಯಾಗುತ್ತಿದ್ದಾರೆ. ಇದರಿಂದಾಗಿಯೇ ಇದೀಗ ಭಿನ್ನ ಕಥಾ ಹಂದರದ ನವೀನ ಪ್ರಯೋಗಗಳ ಪರ್ವ ಆರಂಭಗೊಂಡಿದೆ. ಅದೇ ಅಲೆಯಲ್ಲಿ ತೇಲಿ ಬಂದು ಇದೀಗ ತೆರೆಗಾಣಲು ಸಜ್ಜಾಗಿರುವ ಚಿತ್ರ ರಾಗ!
ಇದುವರೆಗೂ ನೂರಾರು ಚಿತ್ರಗಳಲ್ಲಿ ನಟಿಸಿ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಮಿತ್ರ, ಈ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಹೊರ ಹೊಮ್ಮಿದ್ದಾರೆ. ಜೊತೆಗೆ ಕುರುಡನಾಗಿ ಮನಮುಟ್ಟುವ ಪಾತ್ರವೊಂದರಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಇದರ ಟ್ರೈಲರ್ ಕೂಡಾ ಭಾರೀ ಫೇಮಸ್ ಆಗಿರೋದರ ಜೊತೆಗೆ ಅದರ ಮೇಕಿಂಗ್, ಕಥೆಯ ಹೊಳಹು ಮುಂತಾದವುಗಳ ಮೂಲಕ ಗಮನ ಸೆಳೆದಿದೆ.

ನಮ್ಮ ಸುತ್ತಲೇ ಸುಳಿದಾಡುವ ಅಂಧರ ಬದುಕಿನ ಕ್ಷಣಗಳನ್ನು ನಾವ್ಯಾರೂ ಕಲ್ಪಿಸಿಕೊಳ್ಳುವುದಿಲ್ಲ.

ಒಳಗಣ್ಣಿನ ಮೂಲಕವೇ ನಮ್ಮ ಕಣ್ಮುಂದಿನ ಜಗತ್ತನ್ನು ಕಲ್ಪಿಸಿಕೊಂಡು ಬದುಕೋ ಇವರ ಪಾಲಿಗೆ ಸಣ್ಣ ಬೆಳಕಿನ ಬಿಂದುವೂ ಮರೀಚಿಕೆ. ಎರಡೂ ಕಣ್ಣ ಸರಿಯಿರುವವರು ನಿತ್ಯ ಹಳಿಯುವ ಈ ಜಗತ್ತು ಅಂಧರ ಪಾಲಿಗೆ ರೋಚಕ ಕಲ್ಪನೆಗಳ ಕಣಜ. ಒಂದು ಮಾತಲ್ಲಿ ಬಂಧಿಸಲಾಗದ ಅಂಧರ ಮನೋಲೋಕವನ್ನು ನಿರ್ದೇಶಕ ಪಿ ಸಿ ಶೇಖರ್ ಅನಾವರಣಗೊಳಿಸಲು ಅಣಿಯಾಗಿದ್ದಾರೆ. 

ಇದುವರೆಗೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಂಡಿರೋ ಮಿತ್ರ ಅವರ ಹೆಸರು ಅವರ ಭಿನ್ನವಾದ ಬಾಡಿ ಲಾಂಗ್ವೇಜ್, ವಿಶಿಷ್ಠ ಹಾಸ್ಯ ಶೈಲಿಗಳು ಕಣ್ಮುಂದೆ ಸರಿಯುತ್ತವೆ. ಇಂಥಾ ಮಿತ್ರ ಅವರ ಪಾಲಿಗೆ ರಾಗ ಚಿತ್ರದ ಪಾತ್ರ ವಿಭಿನ್ನವಾದದ್ದೂ ಹೌದು, ಸವಾಲಿನದ್ದೂ ಹೌದು. ಯಾಕೆಂದರೆ, ಹಾಸ್ಯಕ್ಕೆ ಹೆಸರಾದ ಮಿತ್ರ ಇಲ್ಲಿ ಭಾವನೆಗಳ ಮೂಲಕವೇ ಆವರಿಸಿಕೊಳ್ಳುವ ಪಾತ್ರವನ್ನ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಇವರೇ ಹೀರೋ. ಈ ನಿಟ್ಟಿನಲ್ಲಿ ನೋಡ ಹೋದರೂ ಮಿತ್ರ ಅವದ್ದು ಭಿನ್ನ ಹಾದಿಯೇ. ಯಾಕೆಂದರೆ, ಹೀರೋ ಎಂಬ ಸಾಲು ಸಾಲು ಇಮೇಜುಗಳಾಚೆಗೆ ಸಾಮಾನ್ಯ ವ್ಯಕ್ತಿಯಾಗಿ, ಅಸಾಮಾನ್ಯ ಪಾತ್ರದ ಮೂಲಕ ಅವರು ಪ್ರೇಕ್ಷಕರನ್ನು ಎದುರುಗೊಳ್ಳುವ ಖುಷಿಯಲ್ಲಿದ್ದಾರೆ.

 

ಮಿತ್ರ ‘ರಾಗ’ ಚಿತ್ರಕ್ಕಾಗಿ ಕೇವಲ ಕಾಮಿಡಿ ಟ್ರ್ಯಾಕ್ ಅನ್ನು ಮಾತ್ರ ಬದಲಿಸಿಕೊಂಡಿಲ್ಲ. ದೈಹಿಕವಾಗಿಯೂ ಈ ಪಾತ್ರಕ್ಕಾಗಿ ತಮ್ಮನ್ನು ತಾವು ಒಗ್ಗಿಸಿಕೊಂಡಿದ್ದಾರೆ. ಈ ಚಿತ್ರ ಆರಂಭಕ್ಕೂ ಮುನ್ನ ತುಸು ಹೆಚ್ಚೇ ಊದಿಕೊಂಡಿದ್ದ ಮಿತ್ರ, ಈ ಪಾತ್ರಕ್ಕಾಗಿ ಸಣ್ಣಗಾಗಿದ್ದಾರೆ. ಈ ಚಿತ್ರದಲ್ಲಿ ಸಂಭಾಷಣೆ ತುಸು ಕಡಿಮೆ. ಎಲ್ಲವನ್ನೂ ಆಂಗಿಕ ಹಾವಭಾವ ಮತ್ತು ಭಾವನೆಗಳ ಮೂಲಕವೇ ತೋರಿಸಿಕೊಳ್ಳಬೇಕಿದ್ದುದರಿಂದ ಅದಕ್ಕೂ ಮಿತ್ರ ತಯಾರಿ ನಡೆಸಿದ್ದರಂತೆ. ಓರ್ವ ಹಾಸ್ಯ ನಟನನ್ನು ಗಂಭೀರ ಪಾತ್ರಕ್ಕೆ ಒಗ್ಗಿಸೋದು ಕಷ್ಟವೇ. ಆದರೆ, ಆ ಸವಾಲನ್ನು ನಿರ್ದೇಶಕ ಪಿ ಸಿ ಶೇಖರ್ ಸ್ವೀಕರಿಸಿದ್ದಾರೆ. ಮಿತ್ರ ಕೂಡಾ ಅದರಲ್ಲಿ ಗೆದ್ದಂತಿದ್ದಾರೆ.

ಈ ಚಿತ್ರದಲ್ಲಿ ಮಿತ್ರನ ಜೊತೆಗೆ ಅಂಧ ಹುಡುಗಿಯಾಗಿ ಕಾಣಿಸಿಕೊಂಡಿರುವಾಕೆ ಮಲೆಯಾಳಿ ಬೆಡಗಿ ಭಾಮಾ. ಈಕೆಯ ಪಾತ್ರವೂ ಮನ ಮುಟ್ಟುವಂತಿದೆಯಂತೆ. ಹೀಗೆ ನಾನಾ ರೀತಿಯಲ್ಲಿ ಕೌತುಕ ಕೆರಳಿಸಿರೋ ಈ ಚಿತ್ರ ಪಕ್ಕಾ ಕಮರ್ಶಿಯಲ್ ಎಂಬುದು ಚಿತ್ರತಂಡದ ಅಫಿಡವಿಟ್. ಅಂಧರ ಒಳಗನ್ನು ಖಾಲಿ ಕ್ಯಾನ್ವಾಸಿನ ಮೇಲೆ ಸುಂದರವಾಗಿ ಹರಡಿದಂತೆ ಕಾಣಿಸೋ ಟ್ರೈಲರ್ ಒಟ್ಟಾರೆ ಚಿತ್ರದ ಕಸುವನ್ನು ಸಾರುವಂತಿದೆ. ಜನ ಇದನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

Courtesy: Cinebuzz

Facebook Auto Publish Powered By : XYZScripts.com