ಕರಿಬೇವಿನ ಬಗ್ಗೆ ನಿಮಗೆ ಗೊತ್ತಿರದ ಅದ್ಭುತ ಸಂಗತಿಗಳು

ಭಾರತೀಯ ಅಡುಗೆಯಲ್ಲಿ ಕರಿಬೇವಿಗೆ ಪ್ರಧಾನ ಸ್ಥಾನ. ಇದು ಕೇವಲ ರುಚಿ, ಸುಗಂಧ ಒದಗಿಸುವ ಎಲೆ ಮಾತ್ರವಲ್ಲ. ದೇಹದಲ್ಲಿ ಸಕ್ಕರೆಯನ್ನು ಹದ್ದುಬಸ್ತಿನಲ್ಲಿಡುವ ಮದ್ದು. ಅಜೀರ್ಣ, ಭೇದಿ, ಮಲಬದ್ಥತೆ, ಯಕೃತ್ ದೋಷ ಪರಿಹರಿಸುವ ವಿರಳೌಷಧ. ಹಿತ್ತಲಗಿಡ ಮದ್ದು ಎನ್ನಲು ಇದೇ ಪುರಾವೆ. ಕರಿಬೇವಿನ ಎಲೆ  ನಿಜಕ್ಕೂ ಅಸಂಖ್ಯ ರಾಸಾಯನಿಕ ತತ್ವಗಳ ಭಂಡಾರವೇ ಸೈ.
ವಿಜ್ಞಾನಿಗಳ ದಂಡು ಮೊಗೆದಷ್ಟೂ ಸರಕು  ಕರಿಬೇವಿನ ಎಲೆಯಲ್ಲಿ ಹುದುಗಿವೆ. ಬೇವು ಕಹಿ, ಆದರೆ ಈ ಕರಿ‘ಬೇವು’ ಅಷ್ಟು ಕಹಿಯಲ್ಲ. ಸುಗಂಧವೇ ಇದರ ಪ್ರಧಾನ ಗುಣ. ಅನೇಕ ತೈಲಾಂಶ ಒಳಗೊಂಡ ಕರಿಬೇವಿನ ಎಲೆ ಬಲು ಸುವಾಸನೆ ಬೀರುತ್ತದೆ. ಅಂದಹಾಗೆ ಕರಿಬೇವಿನ ತವರು ಭಾರತದ ಹಿಮಾಲಯ ಪ್ರದೇಶ. ಇದರಲ್ಲಿ ನಾಲಗೆಗೆ ರುಚಿ, ಸೇವಿಸಿದ ಆಹಾರ ಜೀರ್ಣಿಗೊಳಿಸುವ ಗುಣಗಳು ಇರುವುದರಿಂದ ಸಾರು, ಹುಳಿ, ಮಜ್ಜಿಗೆ ಪಲ್ಯ, ಉಪ್ಪಿಟ್ಟಿನ ಜೊತೆ ಬಳಸುತ್ತೇವೆ. ಏನೇ ಅಡುಗೆಯಿರಲಿ, ಕರಿಬೇವಿನ ಎಲೆ ಬಿದ್ದರೇ ಘಮಘಮ.
ಕರಿಬೇವಿನ ಎಲೆ ಮಾತ್ರವಲ್ಲದೆ, ಇದರ ಬೇರು, ತೊಗಟೆ, ಹಣ್ಣುಗಳೂ ಸಹ ಔಷಧೀಯ ಗುಣಗಳನ್ನು ಹೊಂದಿದ್ದು, ಕರಿಬೇವಿನ ಬಗ್ಗೆ ನಿಮಗೆ ಗೊತ್ತಿರದ ಇನ್ನು ಅನೇಕ ಆರೋಗ್ಯಕರ ಸಂಗತಿಗಳನ್ನು ಆಯುರ್ವೇದ ವೈದ್ಯರು ಇಲ್ಲಿ ವಿವರಿಸಿದ್ದಾರೆ.

ಜ್ವರವಿರುವ ಸಮಯದಲ್ಲಿ ಕರಿಬೇವಿನ ಎಲೆಗಳ ಕಷಾಯ ಕುಡಿಯುವುದರಿಂದ ದಾಹ, ಉಷ್ಣತೆ ತಗ್ಗುತ್ತದೆ.
ಬೊಜ್ಜನ್ನು ಕರಗಿಸಲು ಬಯಸುವವರು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ(10-20) ತಿನ್ನುವುದು ಒಳ್ಳೆಯದು.
ಕರಿಬೇವಿನ ಎಲೆಗಳನ್ನು ಅಗಿದು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆಯಲ್ಲದೇ ಬಳಲಿಕೆ ನಿವಾರಣೆಯಾಗುತ್ತದೆ.
ಮಧುಮೇಹದಿಂದ ಬಳಲುವವರು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹತ್ತು ಎಲೆಗಳನ್ನು ತಿನ್ನುವುದು ಒಳ್ಳೆಯದು.
ಮೂಲವ್ಯಾಧಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು ಜೇನುತುಪ್ಪದಲ್ಲಿ ಅದ್ದಿ ದಿನಕ್ಕೆರಡು ಬಾರಿ ತಿನ್ನುವುದರಿಂದ ಉರಿ ಮತ್ತು ನೋವು ಕಡಿಮೆಯಾಗುವುದಲ್ಲದೇ ಮಲವಿಸರ್ಜನೆಯೂ ಸಲೀಸಾಗುತ್ತದೆ.
ಕ್ರಿಮಿಕೀಟಗಳು ಕಚ್ಚಿದ ಸ್ಥಳಕ್ಕೆ ಕರಿಬೇವಿನ ಹಣ್ಣು ಮತ್ತು ನಿಂಬೆಹಣ್ಣಿನ ರಸ ಬೆರೆಸಿ ಹಚ್ಚುವುದರಿಂದ ನವೆ ಮತ್ತು ಉರಿ ನಿವಾರಣೆಯಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಲಿನಲ್ಲಿ ಬೇಯಿಸಿ ಲೇಪಿಸುವುದರಿಂದಲೂ ವಿಷ ನಿವಾರಣೆಯಾಗುತ್ತದಲ್ಲದೆ ಉರಿಯೂ ತಗ್ಗುತ್ತದೆ.
ಆಮಶಂಕೆ ಭೇದಿಯಾಗುತ್ತಿದ್ದಲ್ಲಿ ಕರಿಬೇವಿನ ಎಲೆಯ ಕಷಾಯ ಸೇವನೆ ಉತ್ತಮವಾದುದು.
ರಕ್ತಭೇದಿಯಾಗುತ್ತಿದ್ದಲ್ಲಿ ಕರಿಬೇವಿನ ಎಲೆಯ ಚಟ್ನಿ ತಿನ್ನಬೇಕು.
ಮೂತ್ರಕೋಶದ ತೊಂದರೆಗೆ ಬೇರಿನ ಕಷಾಯ ಪರಿಣಾಮಕಾರಿ.

ಸಂಶೋಧನೆ:  
ಇಲಿಗಳಲ್ಲಿ ಕರಿಬೇವಿನ ಎಲೆಗಳ ಪ್ರಯೋಗದಿಂದ ರಕ್ತದಲ್ಲಿ ಸಕ್ಕರೆ ಅಂಶ ಗಣನೀಯವಾಗಿ ಇಳಿಮುಖವಾಗಿದ್ದು ರುಜುವಾತಾಗಿದೆ.
ಪೋಷಕಾಂಶಗಳು (100 ಗ್ರಾಂ ಕರಿಬೇವಿನಲ್ಲಿ)
ತೇವಾಂಶ -64 ಗ್ರಾಂ
ಕಬ್ಬಿಣ -4 ಮಿ.ಗ್ರಾಂ
ಪಿಷ್ಠ -15 ಗ್ರಾಂ
‘ಎ’ ಜೀವಸತ್ವ -13,580ಐಯು
ಸಸಾರಜನಕ-6 ಗ್ರಾಂ
ಕೊಬ್ಬು-1 ಗ್ರಾಂ
ಸುಣ್ಣಾಂಶ-705 ಮಿ.ಗ್ರಾಂ.
ರಂಜಕ-60 ಮಿ.ಗ್ರಾಂ
ಬಿ1 ಜೀವಸತ್ವ-192 ಎಂಸಿಜಿ
ನಯಾಸಿನ್-3 ಮಿ.ಗ್ರಾಂ.
‘ಸಿ’ ಜೀವಸತ್ವ-4 ಮಿ.ಗ್ರಾಂ.
Courtesy: Balkani News

Facebook Auto Publish Powered By : XYZScripts.com