ಕತ್ರಿಗುಪ್ಪೆ ಕಟಿಂಗ್ ಶಾಪ್ ಸುತ್ತ ರಿಯಲ್ ಪ್ರೇಮ ಕಥೆ!

ಕತ್ರಿಗುಪ್ಪೆ ಕಟಿಂಗ್ ಶಾಪ್. ಬೆಂಗಳೂರಿನ ಪುರಾತನ ಏರಿಯಾಗಳಲ್ಲೊಂದಾದ ಕತ್ರಿಗುಪ್ಪೆಯ ಹೆಸರು ಹೊಂದಿರೋ ಇದು ಸಿನಿಮಾ ಒಂದರ ಟೈಟಲ್ಲು. ಹೆಸರಲ್ಲಿಯೇ ಒಂಥರಾ ನಿಗೂಢ ಸೆಳೆತ ಹೊಂದಿರೋ ಈ ಚಿತ್ರಕ್ಕೀಗ ಸಂಪೂರ್ಣ ತಯಾರಿಯೂ ಮುಗಿದಿದೆ. ಈ ಚಿತ್ರ ಕೆಲವಾರು ಇಂಟರೆಸ್ಟಿಂಗ್ ವಿಚಾರಗಳನ್ನೂ ಹೊಂದಿದೆ. ಅದು ಇಲ್ಲಿದೆ.
ಕನ್ನಡದಲ್ಲಿ ಥರ ಥರದ ಪ್ರೇಮ ಕಥಾನಕಗಳು ತೆರೆ ಕಂಡಿವೆ. ಆದರಿದು ಒಂದು ಸತ್ಯ ಕಥೆ ಆಧಾರಿತವಾದ ಚಿತ್ರ. ಈ ಇಡೀ ಚಿತ್ರದಲ್ಲಿ ಕತ್ರಿಗುಪ್ಪೆಯ ಕಟಿಂಗ್ ಶಾಪ್ ಕೇಂದ್ರಬಿಂದುವಾದ್ದರಿಂದ ಅದೇ ಟೈಟಲ್ಲನ್ನೂ ಇಡಲಾಗಿದೆಯಂತೆ. ಈ ಚಿತ್ರವನ್ನು ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಕೆಲಸ ಮಾಡಿ ಅನುಭವ ಹೊಂದಿರುವ ಪ್ರಖ್ಯಾತ್ ನಿರ್ದೇಶನ ಮಾಡುತ್ತಿದ್ದಾರೆ. (ಪಿ.ಕುಮಾರ್, ಎಂ.ಎಸ್.ಶ್ರೀನಿವಾಸ್, ರಾಜಮೌಳಿ ಮುಂತಾದ ನಿರ್ದೇಶಕರ ಬಳಿ)

ಇದು ದಶಕದ ಹಿಂದೆ ನಡೆದು ನಾನಾ ತಿರುವುಗಳನ್ನ ಪಡೆದುಕೊಂಡಿದ್ದ ಪ್ರೇಮ ಕಥೆಯೊಂದನ್ನು ಆಧರಿಸಿದೆ. ಎಂಜಿ ರಸ್ತೆಯಲ್ಲಿ ಅಡಿಡಾಸ್ ಮತ್ತು ರಿಬಾಕ್ ಶೋರೂಂ ಹೊಂದಿದ್ದ ಕೇರಳ ಮೂಲದ ಅಗರ್ಭ ಶ್ರೀಮಂತ ಕ್ರಿಶ್ಚಿಯನ್ ವ್ಯಕ್ತಿಗೊಬ್ಬಳು ಸುಂದರಿ ಮಗಳು. ಆಕೆ ರೋಸಿ. ಶ್ರೀಮಂತಿಕೆಯನ್ನೇ ಹಾಸಿ ಹೊದ್ದು ಬೆಳೆದಿದ್ದ ಈಕೆ ೨ಂಂ೬ರ ಸುಮಾರಿಗೆ ಬೆಂಗಳೂರಿಗೆ ಬಂದು ಓದಿದ್ದೆಲ್ಲ ಮೌಂಟ್ ಕಾರ್ಮಲ್ ಸ್ಕೂಲಿನಲ್ಲಿ. ಇಂಥಾ ಹೆಣ್ಣುಮಗಳು ಪ್ರೀತಿಯಲ್ಲಿ ಬಿದ್ದದ್ದು ಇದೇ ಕತ್ರಿಗುಪ್ಪೆ ಕಟಿಂಗ್ ಶಾಪ್ನಲ್ಲಿ ಕೆಲಸಕ್ಕಿದ್ದ ಪರಮ ಅಬ್ಬೇಪಾರಿಯೊಬ್ಬನೊಂದಿಗೆ.
ಆತ ಕತ್ರಿಗುಪ್ಪೆ ಕೃಷ್ಣ ಎಂಬ ವೇಸ್ಟ್ ಬಾಡಿ ಹುಡುಗ. ಇಂಥವನನ್ನು ರೋಸಿ ಪ್ರೀತಿಸಿ ಮದುವೆಯಾಗುತ್ತಾಳೆ. ಆ ನಂತರ ಆಕೆ ಅಪ್ಪ ಎಂಟ್ರಿ ಕೊಟ್ಟ ನಂತರ ಇದೊಂದು ದುರಂತ ಪ್ರೇಮ ಕಥೆಯಾಗಿ ತಿರುವು ಪಡೆಯುತ್ತೆ. ಈ ಚಿತ್ರದಲ್ಲಿ ರೋಸಿಯ ಅಪ್ಪನಾಗಿ ಪ್ರಕಾಶ್ ರೈ ನಟಿಸಲಿದ್ದಾರೆ. ಇನ್ನುಳಿದಂತೆ ಖ್ಯಾತ ತೆಲುಗು ನಟ ಜಗಪತಿಬಾಬು, ಚರಣ್ ರಾಜ್, ಕರಿಸುಬ್ಬು, ಪದ್ಮಜಾ ರಾವ್ ಮುಂತಾದವರ ಅದ್ದೂರಿ ತಾರಾಗಣವೂ ಈ ಚಿತ್ರದಲ್ಲಿರಲಿದೆ.

ರೌಡಿಸಂ ಹಿನ್ನೆಲೆಯಲ್ಲಿ ಒಂದು ಪ್ರೇಮಕಥೆ ಈ ಚಿತ್ರದ ಮೂಲಕ ತೆರೆದುಕೊಳ್ಳಲಿದೆ. ಇನ್ನೂ ವಿಶೇಷವೆಂದರೆ ಈ ಹಿಂದೆ ಉಪೇಂದ್ರ ನಿರ್ದೇಶನದ ಓಂ ಚಿತ್ರದಲ್ಲಿ ಬೆಂಗಳೂರಿನ ರಿಯಲ್ ಭೂಗತ ಜೀವಿಗಳೇ ಅಭಿನಯಿಸಿದ್ದರಲ್ಲಾ? ಅದಾಗಿ ವರ್ಷಾಂತರ ಗಳ ನಂತರ ಈ ಚಿತ್ರದಲ್ಲಿಯೂ ಒಂದಷ್ಟು ಮಂದಿ ರಿಯಲ್ ರೌಡಿಗಳು ಅಭಿನಯಿಸಲಿದ್ದಾರಂತೆ.
ಇನ್ನುಳಿದಂತೆ ಈ ಚಿತ್ರದ ನಾಯಕಿಯಾಗಿ ಶಿವಮೊಗ್ಗದ ಕ್ಯಾಥರಿನ್ ಆಯ್ಕೆಯಾಗಿದ್ದಾರೆ. ಹೀರೋ ಯಾರೆಂಬುದನ್ನು ಸಸ್ಪೆನ್ಸ್ ಆಗಿಡಲಾಗಿದೆ.
ವಿಷನ್ ಸಿನಿಮಾಸ್ ಲಾಂಛನದಲ್ಲಿ ಎ.ಮಂಜು ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಾರ್ತಿಕ್ ಚಾವ್ಲಾ ಅವರ ಛಾಯಾಗ್ರಹಣವಿದೆ. ರಾಘವೇಂದ್ರ ಹಡಪದ್ ಸಂಗೀತ ನಿರ್ದೇಶನ, ಡಿಫ಼ರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಇಮ್ರಾನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Courtesy: Cinebuzz

Facebook Auto Publish Powered By : XYZScripts.com