ಇದು ವಿಚಿತ್ರ ಹಾರರ್‌ ಕಥೆ

ಕನ್ನಡ ಚಿತ್ರರಂಗದಲ್ಲಿನ ಭೂತಚೇಷ್ಟೆಗಳು ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. ಆತ್ಮಗಳ ‘ಕಥನ’ ಹಲವು ಹೊಸ ನಿರ್ದೇಶಕರಿಗೆ ನೆಚ್ಚಿನ ವಸ್ತುವಾಗುತ್ತಿದೆ. ಇಂಥದ್ದೇ ಒಂದು ವಿಚಿತ್ರ ಹಾರರ್ ಕಥೆಯನ್ನು ಇಟ್ಟಕೊಂಡು ಸಿನಿಮಾ ಮಾಡಿ ಮುಗಿಸಿದೆ ಇಲ್ಲೊಂದು ಯುವತಂಡ.   ಅಂದ ಹಾಗೆ ಈ ಸಿನಿಮಾದ ಹೆಸರು ‘ಕಥಾ ವಿಚಿತ್ರ’. ಹೆಸರನ್ನು ವಿನ್ಯಾಸ ಮಾಡಿರುವ ರೀತಿಯೂ ವಿಚಿತ್ರವಾಗಿಯೇ ಇದೆ. ‘ಇದು ವಿಚಿತ್ರವಷ್ಟೇ ಅಲ್ಲ, ವಿಭಿನ್ನವಾದ ಸಿನಿಮಾವೂ ಹೌದು’ ಎಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತದೆ ಈ ತಂಡ.   ಅನೂಪ್‌ ಆಂಟೋನಿ ನಿರ್ದೇಶನ ಮಾಡಿರುವ ‘ಕಥಾ ವಿಚಿತ್ರ’ಕ್ಕೆ ಹಣ ಹೂಡಿರುವವರು ಕೆ. ಸುಧಾಕರ್‌. ‘ಇದೊಂದು ವಿಭಿನ್ನ ಹಾರರ್‌ ಕಥೆ, ಕೊನೆಯ ತನಕವೂ ಕುತೂಹಲ ಕಾಪಾಡಿಕೊಂಡು ಹೋಗುತ್ತದೆ’ ಎನ್ನುತ್ತಾರೆ ಸುಧಾಕರ್‌. ಚಿತ್ರದ ನಾಯಕ ಹರ್ಷವರ್ಧನ್‌ ಹಾಗೂ ನಾಯಕಿ ಅನು ಸಹ – ‘ಸಿನಿಮಾ ಚೆನ್ನಾಗಿ ಬಂದಿದೆ.
ಆದರೆ, ಕಥೆಯನ್ನು ನಾವು ಹೇಳುವ ಹಾಗಿಲ್ಲ’ ಎಂದಷ್ಟೇ ಹೇಳಿ ಮಾತು ಮುಗಿಸಿದರು. ತಮಗೆ ಎದುರಾದ ಬಹುತೇಕ ಪ್ರಶ್ನೆಗಳಿಗೆ ಅವರ ಉತ್ತರ ‘ತೆರೆಯ ಮೇಲೆ’ ನೋಡಿ ಎಂಬುದೇ ಆಗಿತ್ತು.
55 ದಿನಗಳಲ್ಲಿ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಆರಂಭದಲ್ಲಿ ಚಿತ್ರದಲ್ಲಿ ಹಾಡುಗಳು ಬೇಕಾಗಿಲ್ಲ ಎಂದು ನಿರ್ಧರಿಸಲಾಗಿತ್ತಂತೆ. ‘ಆದರೆ ನಂತರ ಒಂದು ಹಾಡು ಇದ್ದರೆ  ಚೆನ್ನಾಗಿರುತ್ತದೆ ಅನಿಸಿತು. ನಂತರ ಇನ್ನೊಂದು ಹಾಡು ಅಳವಡಿಸಿದೆವು. ಈಗ ಸಿನಿಮಾದಲ್ಲಿ ಮೂರು ಹಾಡುಗಳಿವೆ’ ಎಂದರು ನಿರ್ದೇಶಕ ಅನೂಪ್‌.    ನಾಲ್ಕು ತಿಂಗಳಲ್ಲಿ ಸ್ಕ್ರಿಪ್ಟ್‌ ಬರೆದು ನಂತರ ಪ್ರತಿಯೊಂದು ಹಂತದಲ್ಲಿಯೂ ಪ್ಲಾನ್‌ ಮಾಡಿ ಈ ಸಿನಿಮಾ ಮುಗಿಸಿದ್ದಾರೆ. ಸೆನ್ಸಾರ್‌ ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರವನ್ನೂ ನೀಡಿದೆ. ಮೇ ತಿಂಗಳಲ್ಲಿ ಚಿತ್ರ ತೆರೆಗೆ ತರುವ ಯೋಜನೆ ತಂಡದ್ದು. ಈ ಚಿತ್ರದ ಮೂಲಕ ಮ್ಯಾಥ್ಯೂ ಮನು ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಪರಿಚಿತರಾಗುತ್ತಿದ್ದಾರೆ.
‘ಈ ಸಿನಿಮಾ ನನ್ನ ವೃತ್ತಿಬದುಕಿನಲ್ಲಿ ತುಂಬ ಮುಖ್ಯವಾದ ಸಿನಿಮಾ. ಈ ಸಿನಿಮಾದಲ್ಲಿನ ‘ಕದ್ದು ಮುಚ್ಚಿ..’ ಎಂಬ ಹಾಡನ್ನು ಒಂದೇ ರಾತ್ರಿಯಲ್ಲಿ ನಾನೇ ಬರೆದು ಸಂಯೋಜನೆ ಮಾಡಿದ್ದೇನೆ. ಕಷ್ಟಪಟ್ಟು ಮೇಲೆ ಬಂದವನು ನಾನು. ಇನ್ನು ಮುಂದೆ ಒಳ್ಳೊಳ್ಳೆ ಗೀತೆಗಳನ್ನು ನೀಡುತ್ತೇನೆ’ ಎಂದರು ಮ್ಯಾಥ್ಯೂ.    ‘ರಾಟೆ’, ‘ಕೆಂಡಸಂಪಿಗೆ’ ಚಿತ್ರಗಳಲ್ಲಿ ಸಹಾಯಕ ಕ್ಯಾಮೆರಾಮೆನ್‌ ಆಗಿ ಕೆಲಸ ಮಾಡಿರುವ ಅಭಿಲಾಷ್‌ ಈ ಸಿನಿಮಾದ ಛಾಯಾಗ್ರಹಣ ಜವಾವ್ದಾರಿಯನ್ನು ಹೊತ್ತಿದ್ದಾರೆ. ನಾಗೇಂದ್ರ ಅರಸ್‌ ಸಂಕಲನದ ಬಲವೂ ಈ ಚಿತ್ರಕ್ಕಿದೆ.

Courtesy: Prajavani

Facebook Auto Publish Powered By : XYZScripts.com